ಇನ್ನು ಚತುಃಶೈವಗಳಾವಾವವೆಂದೊಡೆ:
ಸಮಾನ್ಯಶೈವ ಮಿಶ್ರಶೈವ ಶುದ್ದಶೈವ ವೀರಶೈವವೆಂದು ಕ್ರಮದಿಂದದಪ್ಪುವು.
ಅ ನಾಲ್ಕು ವಿಧವಾದ ಶೈವಗಳೊಳಗೆ ಮೊದಲು
ಸಾಮಾನ್ಯಶೈವ ಲಕ್ಷಣವನು ಹೇಳಿಹೆನು:
ಆವನಾನೊಬ್ಬ ಸಾಮಾನ್ಯ ಶೈವನು ವಿಭೂತಿಯ ಪಟ್ಟ ಮಾತ್ರದಿಂದವೆ
ಶುದ್ಧವಾಗುತ್ತಿದ್ದನಾಗಿ ಸ್ವಯಂಭು ಲಿಂಗವನಾದರೆಯು
ದೇವ ದಾನವ ಮಾನವಾದಿಗಳಿಂದ ಪ್ರತಿಷ್ಠಿತವಾದ ಲಿಂಗವನಾದರೆಯು
ಅವ ವೇಳೆಯಲ್ಲಿ ಕಂಡನೋ ಅದೇ ವೇಳೆಯಲ್ಲಿ
ಅಲ್ಲಿರ್ದರ್ಚನೆಯ ಮಾಡೂದು,
ಪ್ರದಕ್ಷಿಣಿ ದರ್ಶನ ನಮಸ್ಕಾರವನಾದಡೆಯೂ ಮಾಡೂದು,
ಶಿವಕೀರ್ತಿ ಶಿವ ವಚನ ಶಿವಭಕ್ತರಲ್ಲಿ ಪ್ರೀತಿಯುಳ್ಳಾತನು
ಈ ಶಿವಾರ್ಚನಾದಿಗಳಲ್ಲಿ ಸಂಪೂರ್ಣ ನಿಯತಿ ಇಲ್ಲದಿದ್ದರೂ
ಲಬ್ಧವಾದ ಕ್ರಿಯಗಳನಾಚರಿಸಿವುದು
ಸಾಮನ್ಯ ಶೈವ ಲಕ್ಷಣವೆಂದು ನುಡಿಯುವರಯ್ಯ.
ಇನ್ನು ಮಿಶ್ರ ಶೈವ ಲಕ್ಷಣವೆಂತೆಂದೊಡೆ:
ಗ್ರಂಥ: ಶೈವಂ ಚ ವೈಷ್ಣವಂ ಶಾಕ್ತ ಕೌಮಾರಂ ಗಣಪತ್ಯಕಂ ಸೌರಂ
ಚಾಖಿಲ ದೈವತಂ| ಪೂಜಿನಂ ಚ ಸಮಾಚರೇತ್||’ ಎಂದು
ಸಿಂಹಾಸನದಲ್ಲಿ ಸ್ಥಾಪಿತವಾದ ಲಿಂಗಪೂಜೆಯನು,
ದೇವಿಯ ಪೂಜೆಯನು, ವಿಘ್ವೇಶ್ವರ ಪೂಜೆಯನು,
ಷಣ್ಮುಖ ಪೂಜೆಯನು, ಸೂರ್ಯ ಪೂಜೆಯನು,
ಆವನಾನೊಬ್ಬ ವೈದಿಕ ಶೈವನು ಈ ಪಂಚ ಪೂಜೆ ಸಹವಾಗಿ ಇಂದ್ರಾದ್ಯಖಿಲ
ಪೂಜೆಯನು ಲೇಸಾಗಿ ಮಾಡುವುದು.
ಈ ಪೂರ್ವೋಕ್ತವಾದ ಪಂಚಾವರಣ ಮೊದಲಾದ
ಸಮಸ್ತ ದೇವತೆಗಳಲ್ಲಿಯೂ ಆಯಾ ದೇವತಾ ಮಂತ್ರಗಳಲ್ಲಿಯೂ
ಬೆರೆಯರ್ದಿದರಿಂದ ಸಮಾನವಾದ ಭಕ್ತಿಯೊಡನೆ ಕೂಡಿ
ಸಮಸ್ತ ದೇವತೆಗಳನ್ನು ಶಿವಪರಿಪೂರ್ಣ ಭಾವದಿಂ ಶಿವಲಿಂಗದೊಡನೆ
ಕೂಡಿ ಭಾವಿಸುವುದು.
ಈ ಪ್ರಕಾರದಲ್ಲಿ ಮಿಶ್ರ ಶೈವವನು ಹೇಳುವರಯ್ಯ.
ಶಿವನನು ಉದ್ಧೇಶಿಸಿರುವುದರಿಂದ ಶುದ್ಧ ತತ್ವವಪ್ಪುದು,
ಶಿವನ ದೆಸೆಯಿಂದ ಪುಟ್ಟಿದ ಕಾರಣ ಶೈವ ಶಬ್ದವಾಯಿತ್ತು,
ಶುಧ್ಧ ಶೈವವೆಂದು ನೆನೆಯುತ್ತಾರೆ.
ಆ ಶುದ್ಧ ಶೈವದ ದೆಸೆಯಿಂದ ಹುಟ್ಟಿದವನು ಶಿವ ಬ್ರಾಹ್ಮಣನೆನಿಸಿಕೊಂಬನು
ಇಂತಿವು ಚತುಃಶೈವವಯ್ಯ
ಶಾಂತವೀರೇಶ್ವರಾ