Index   ವಚನ - 58    Search  
 
ಆ ವೀರಶೈವ ಸಮಯವೆಂಥದೆಂದೊಡೆ: ವೇದಗಮ ಪುರಾಣೋಪನಿಷತ್ತುಗಳಲ್ಲಿ ಉತ್ಕರ್ಷವಾಗಿ ಹೇಳಿರುವಂಥಾದ್ದು, ಮತ್ತು ಶಿವೋಪದೇಶ ವಿರಹಿತ ಭಿನ್ನ ಯೋಗಿ ಬೈರವಾರಾಧಕನಾದ ಕಾಪಲಿಕೆ ಜೋಗಿ ಜಿನ ಭಾಜಕನಾದ ಸವಣ ವ್ಯಾಘ್ರ ಜಿನ ಜಟಾಧಾರಣವುಳ್ಳ ಲಿಂಗ ಬಾಹ್ಯವಾದ ಸನ್ಯಾಸಿ, ಕಾಳಮುಖಿ, ಪಾಶುಪತಿ ಎಂಬ ಈ ಷಡುದರುಶನಂಗಳವರ ವರ್ತನೆಯಲ್ಲ; ಮತ್ತೆಂಥಾದಯ್ಯ ಎಂದರೆ; ಆದಿಶೈವ ಮಹಾಶೈವ ಅನುಶೈವ ಅಂತರಶೈವ ಅಂತ್ಯಶೈವ ಪ್ರವರ ಶೈವವೆಂಬ ಆರು ಶೈವದ ನೀತಿಯಲ್ಲ. ಈ ಷಟ್ ಶೈವಂಗಳಿಗೆ ವಿವರವೆಂತೆಂದೊಡೆ: ಶಿವನೆ ಅನಾದಿ ಶೈವನು. ಆ ಶಿವನ ಪಂಚವಕ್ತ್ರದಿಂ ದೀಕ್ಷಿತರಾದ ಕೌಶಿಕ ಕಾಶ್ಯಪ ಭಾರಧ್ವಾಜ ಅತ್ರಿ, ಗೌತಮಾದಿ ಋಷೀಶ್ವರರೆ ಆದಿಶೈವರು. ಆ ಋಷಿ ವಂಶಜರಾಗಿ ದೀಕ್ಷಿತರಾದ ದ್ವಿಜರೆ ಮಹಾಶೈವರು. ಶಿವಸಂಸ್ಕಾರಿಗಳಾದ ಕ್ಷತ್ರಿಯರೆ ಅನುಶೈವರು. ವೀರಶೈವ ದೀಕ್ಷಾ ಸಂಪನ್ನರಾದ ಶೂದ್ರರೆ ಅಂತ್ಯಶೈವರು. ಶಿವಧೀಕ್ಷಾಯುಕ್ತರಾದ ಅಜಾಬಲಾದಿ ಕುಲಾದಿಗಳೆ ಪ್ರವರಶೈವರು ದೀಕ್ಷಾನ್ವಿತರಾಗದುಳಿದ ಜಾತಿಗಳೆ ಅಂತ್ಯಶೈವರೆನಿಸಿಕೊಳ್ಳುತಿರ್ಕ್ಕುಂ. ಮತ್ತಂ, ಐಕ್ಯಕೆಡೆಯಿಲ್ಲದೆ ಭ್ರಮಿಸುವ ಷಡುದರುಶನಂಗಳೆನಿಸುವ ಶೈವ ಶಾಕ್ತೇಯ ವೈಶ್ಣವ ಸೌರ ಗಾಣಪತ್ಯ ಮಾಯಾವಾದಿ ಎಂಬ ಆರು ದರ್ಶನಂಗಳ ಬಗೆಯ ಭ್ರಾಂತಿಯಲ್ಲ, ಮತ್ತಂ, ಶೈವ ಪಾಶುಪತ ಸೋಮ ದಕ್ಷಿಣ ಕಾಳಮುಖಿ ಯಾಮಳವೆಂಬ ಆರು ದರ್ಶನದಂತಲ್ಲವಯ್ಯ. ಇಂತಿವೆಲ್ಲಕ್ಕತೀತವಾದ ಶುದ್ಧ-ವಿಶೇಷ-ನಿರಾಭಾರವೆಂದು ವೀರಶೈವ ಮೂರು ತೆರನಾಗಿಪ್ಪುದು. ಆ ಮೂರೇ ಷಟಸ್ಥಲವಾಗಿ ವರ್ತಿಸುತ್ತಿಪ್ಪುದಯ್ಯ ಶಾಂತವೀರೇಶ್ವರಾ