ಬಳಿಕ
ಕೂರ್ಮ ಅನಂತ ಸಿಂಹ ಪದ್ಮ ವಿಮಲ
ಯೋಗಾದಿ ಪೀಠಂಗಳಲ್ಲಿ ಮುಖ್ಯಮಾದ ಸಿಂಹಾಸನಕ್ಕೆ
ಶ್ವೇತ ರಕ್ತ ಪೀತ ಶ್ಯಾಮ ವರ್ಣದ ಸಿಂಹಾಕಾರಮಾದುದು.
ಧರ್ಮ ಜ್ಞಾನ ವೈರಾಗ್ಯ ಐಶ್ವರ್ಯವೆಂಬ
ನಾಲ್ಕು ಕ್ರಮದಿಂದಾ
ಜ್ಞಾನಾದ್ರಿ ದಿಕ್ಕಿನ ಪಾದಚತುಷ್ಟಯಂಗಳು.
ರಾಜಾವರ್ತಪ್ರಭೆಯ ರೂಪವಾದ
ಅಧರ್ಮ ಅಜ್ಞಾನ ಅವೈರಾಗ್ಯ ಅನಾನೈಶ್ವರ್ಯವೆಂಬ ನಾಲ್ಕು ಕ್ರಮದಿಂ
ಪೂರ್ವಾದ್ರಿಲಿ ದಿಕ್ಕಿನ [ಪಾ]ದ ಚತುರ್ವಿಧಂಗಳ ಮೇಲೆ
ಅಣಿಮಾದಿಗಳೆ ಪೂರ್ವಾದ್ಯಷ್ಟದಿಕ್ಕಿನ ದಳಂಗಳು.
ವಾಮಾದಿ ಸರ್ವಭೂತ ದಮನಾಂತಮಾದ ರುದ್ರರೆ
ಪೂರ್ವ ದಿಕ್ಕಿನ ಕೇಸರಂಗಳು
ವೈರಾಗ್ಯವೆ ಕರಿಣಿಕೆ ವಾಮೆ ಮೊದಲು ಮನೋನ್ಮನಿ ಕಡೆಯಾದ
ನವಶಕ್ತಿಗಳೆ ಪೂರ್ವಾದಿ ಮಧ್ಯಂತಮಾದ ಕರಣಿಕಾ ಬೀಜಂಗಳು
ಬಳಿಕದರ ಮೇಲೆ ಅಗ್ನಿ ರವಿ ಶಶಿ ಮಂಡಲತ್ರಯಂಗಳು.
ಬಳಿಕದರ ಮೇಲೆ ತಮೋ ರಜ ಸತ್ವ ಗುಣಂಗಳವರ ಮೇಲೆ
ಜೀವಾತ್ಮ ಅಂತರಾತ್ಮ ಪರಮಾತ್ಮರುಗಳವರ ಮೇಲೆ
ಅತ್ಮತತ್ತ್ವ ವಿದ್ಯಾತತ್ತ್ವ ಶಿವತತ್ತ್ವಂಗಳಿಂತು
ಪರಿವಿಡಿದಾಯತಮಾದ ಸಿಂಹಾನಮಂ ಪರಿಕಲ್ಪಿಸಿ
ಲಿಂಗಾರ್ಚನೆಯಂ ಮಾಳ್ಪುದಯ್ಯ
ಶಾಂತವೀರೇಶ್ವರಾ