ಇನ್ನು ಅಷ್ಟಾಂಗ ಯೋಗವೆಂತೆಂದೊಡೆ,
ಯಮ ನಿಯಮ ಆಸನ ಪ್ರಾಣಾಯಾಮ
ಪ್ರತ್ಯಾಹಾರ ಧ್ಯಾನ ಧಾರಣ ಸಮಾಧಿ ಎಂದು ಈ ಎಂಟು
ಅಷ್ಟಾಂಗ ಯೋಗಾಂಗಗಳು.
ಈ ಯೋಗಾಂಗಗಳೊಳಗೆ ಉತ್ತರ ಭಾಗ ಪೂರ್ವಭಾಗ ಎಂದು
ಎರಡು ಪ್ರಕಾರವಾಗಿಹವಯ್ಯ.
ಯಮಾದಿ ಪಂಚಕವು ಪೂರ್ವಯೋಗ.
ಧ್ಯಾನ ಧಾರಣ ಸಮಾಧಿ ಈ ಮೂರು ಉತ್ತರಯೋಗ
ಇದಕ್ಕೆ ವಿವರ:
ಇನ್ನು ಯಮಯೋಗಃ ಅದಕ್ಕೆ ವಿವರ, ಅನೃತ ಹಿಂಸೆ ಪರಧನ
ಪರಸ್ತ್ರಿ ಪರನಿಂದೆ ಇಂತಿವಯ್ದನು ಬಿಟ್ಟು ಲಿಂಗಪೂಜೆಯ
ಮಾಡುವುದೀಗ ಯಮಯೋಗ,
ಇನ್ನು ನಿಯಮ ಯೋಗ: ಅದಕ್ಕೆ ವಿವರ,
ಬ್ರಹ್ಮಚಾರಿಯಾಗಿ ನಿರಪೇಕ್ಷನಾಗಿ ಆಗಮಧರ್ಮಗಳಲ್ಲಿ ನಡೆವುತ
ಶಿವನಿಂದೆಯ ಕೊಳದೆ ಇಂದ್ರಿಯಂಗಳ ನಿಗ್ರಹಿಸಿ ಮಾನಸ ವಾಚಕ
ಉಪಾಂಸಿಕವೆಂಬ ತ್ರಿಕರಣದಲ್ಲಿ ಪ್ರಣವ ಪಂಚಾಕ್ಷರಿಯ ಸ್ಮರಿಸುತ್ತ
ಚಿತ್ತದಲ್ಲಿ ಶುಚಿಯಾಗಿ ಅಶುಚಿತ್ವ ಬಿಟ್ಟು ವಿಭೂತಿ ರುದ್ರಾಕ್ಷೆಯ ಧರಸಿ
ಲಿಂಗಾರ್ಚನಾ ತತ್ಪರನಾಗಿ
ಪಾಪಕ್ಕೆ ಭೀತನಾಗಿರುವುದೀಗ ನಿಯಮಯೋಗ.
ಇನ್ನು ಆಸನಯೋಗ: ಅದಕ್ಕೆ ವಿವರ,
ಸಿದ್ಧಾಸನ ಸ್ವಸ್ಥಿಕಾಸನ ಅರ್ಧ ಚಂದ್ರಾಸನ ಪರಿಯಂಕಾಸನ
ಈ ಐದು ಆಸನಯೋಗಂಗಳಲ್ಲಿ ಸುಸ್ಥಿರನಾಗಿ ಮೂರ್ತಿಗೊಂಡು
ಶಿವಲಿಂಗಾರ್ಚನೆಯ ಮಾಡುವುದೀಗ ಆಸನಯೋಗ.
ಇನ್ನು ಪ್ರಾಣಾಯಾಮ: ಅದಕ್ಕೆ ವಿವರ,
ಪ್ರಾಣಪಾನ ವ್ಯಾನೋದಾನ ಸಮಾನವಾಗಿ
ಕೂರ್ಮ ಕೃಕರ ದೇವದತ್ತ ಧನಂಜಯವೆಂಬ ದಶವಾಯುಗಳು.
ಪ್ರಾಣವಾಯು, ಇಂದ್ರನೀಲ ವರ್ಣ
ಹೃದಯಸ್ಥಾನದಲಿರ್ದು ಅಂಗುಷ್ಟ ತೊಡಗಿ ಪ್ರಾಣಾಗ್ರ
ಶ್ವಾಸನಿಶ್ವಾಸನಂಗೈದು
ಅನ್ನ ಜೀರ್ಣಕರಣಮಂ ಮಾಡುತ್ತಿಹುದು.
ಅಪಾನ ವಾಯು, ಹರೀತ ವರ್ಣ ಗುದ ಸ್ಥಾನದಲ್ಲಿರ್ದು
ಮಲ ಮೂತ್ರಂಗಳಂ ವಿಸರ್ಜನೆಯ ಮಾಡಿಸಿ
ಅಧೋದ್ವಾರಮಂ ಬಲಿದು ಅನ್ನ ರಸ ವ್ಯಾಪ್ತಿಯಂ ಮಾಡಿಸುತ್ತಿಹುದು.
ವ್ಯಾನ ವಾಯು, ಗೋಕ್ಷಿರವರ್ಣ, ಸರ್ವ ಸಂಧಿಯಲ್ಲಿರ್ದು
ನೀಡಿಕೊಂಡಿರ್ದುದನು ಮುದುಡಿಕೊಂಡಿರ್ದುದನು ಅನುಮಾಡಿಸಿ
ಅನ್ನಪಾನಮಂ ತುಂಬಿಸುತ್ತಿಹುದು.
ಉದಾನವಾಯು, ಎಳೆ ಮಿಂಚಿನ ವರ್ಣ, ಕಂಠಸ್ಥಾನದಲ್ಲಿರ್ದು
ಸೀನುವ ಕೆಮ್ಮುವ ಕನಸುಕಾಣುವ ಏಳಸುತ ವರ್ಧಿ
ನಿರೋಧನಂಗಳಂ ಮಾಡಿಸಿ ಅನ್ನರಸ ಆಹಾರ
ಸ್ಥಾಪನಂಗೆಯಿಸುತ್ತಿಹುದು.
ಸಮಾನವಾಯು, ನೀಲವರ್ಣ, ನಾಭಿಸ್ಥಾನದಲ್ಲಿರ್ದುದು
ಅಪಾದ ಮಸ್ತಕ ಪರಿಯಂತರ ಸತ್ಪ್ರಾಣಿಸಿಕೊಂಡಂಥಾ
ಅನ್ನರಸಮಂ ಎಲ್ಲ ರೋಮನಾಳಗಳಿಗೆ ಹಂಚಿಕ್ಕುತ್ತಿಹುದು.
ಈ ಅಯ್ದು ಪ್ರಾಣಪಂಚಕ.
ಇನ್ನು ನಾಗವಾಯು ಪೀತವರ್ಣ,
ರೋಮನಾಳಂಗಳಲ್ಲಿರ್ದು ಚಲನೆ ಇಲ್ಲದೆ ಆಡಿಸುತ್ತಿಹುದು
ಕೂರ್ಮ ವಾಯು ಶ್ವೇತವರ್ಣ, ಉದರ ಲಲಾಟದಲ್ಲಿರ್ದು
ಶರೀರಮಂ ತಾಳ್ದು ದೇಹಮಂ ಪುಷ್ಠಿಯಂ ಮಾಡಿಕೊಂಡು ಬಾಯ
ಮುಚ್ಚುತ್ತ ತೆರೆವುತ್ತ ನೇತ್ರದಲ್ಲಿ ಉನ್ಮೀಲನಮಂ ಮಾಡಿಸುತ್ತಿಹುದು.
ಕೃಕರ ವಾಯು ಅಂಜನವರ್ಣ, ನಾಸಿಕಾಗ್ರದಲ್ಲಿರ್ದು ಕ್ಷುಧಾದಿ
ಧರ್ಮಂಗಳ ಗಮನಾಗಮನಂಗಳಂ ಮೂಡಿಸುತ್ತಿಹುದು.
ದೇವದತ್ತ ವಾಯು ಸ್ಪಟಿಕ ವರ್ಣ. ಕಟಿಸ್ಥಾನಂಗಳಲ್ಲಿರ್ದು ಕುಳ್ಳಿರ್ದಲ್ಲಿ
ಮಲಗಿಸಿ ಮಲಗಿರ್ದಲ್ಲಿ ಏಳಿಸಿ ನಿಂದಿರಿಸಿ, ಚೇತರಿಸಿ ಒರಲಿ
ಮಾತನಾಡಿಸುತ್ತಿಹುದು.
ಧನಂಜಯವಾಯು ನೀಲವರ್ಣ,
ಬ್ರಹ್ಮರಂಧ್ರಲ್ಲಿರ್ದು ಕರ್ಣದಲ್ಲಿ ಸಮುದ್ರ ಘೋಷಮಂ ಘೋಷಿಸಿ
ಮರಣಗಾಲಕ್ಕೆ ನಿಘೋಷಮಪ್ಪುದು.
ಈ ಪ್ರಕಾರದಲ್ಲಿ ಮೂಲವಾಯು ಎಂದೆ.
ಸರ್ವತೋಮುಖವಾಗಿ ಚಲಿಸುತ್ತಿಹುದು.
ಆ ಪವನದೊಡನೆ ಪ್ರಾಣ ಕೂಡಿ ಆ ಪ್ರಾಣದೊಡನೆ ಪವನ ಕೂಡಿ
ಹೃದಯ ಸ್ಥಾನದಲ್ಲಿ ನಿಂದು ಹಂಸನೆನಿಸಿಕೊಂಡು
ಆಧಾರ ಸ್ವಾಧೀಷ್ಠಾನ ಮಣಿಪೂರಕ
ಅನಾಹುತ ವಿಶುದ್ಧಿ ಆಜ್ಞೇಯವೆಂಬ
ಷಡುಚಕ್ರಂಗಳ ಮೇಲೆ ಸುಳಿದು
ನವನಾಳಂಗಳೊಳಗೆ ಚರಿಸುತ್ತಿಹುದು.
ಅಷ್ಟದಳಂಗಳೆ ಅಶ್ರಯವಾಗಿ ಅಷ್ಟದಳಂಗಳನು ಮೆಟ್ಟಿ ಚರಿಸುವ
ಹಂಸನು ಅಷ್ಟದಳಂಗಳಿಂದ ವಿಶುದ್ಧಿಚಕ್ರವನೆಯ್ದಿ
ಅಲ್ಲಿಂದ ನಾಸಿಕಾಗ್ರದಲ್ಲಿ ಹದಿನಾರಂಗುಲ ಪ್ರಮಾಣ
ಹೊರಸೂಸುತ್ತಿಪ್ಪುದು.
ಹನ್ನೆರಡಂಗುಲ ಪ್ರಮಾಣು ಒಳಗೆ ತುಂಬುತ್ತಿಹುದು.
ಹೀಂಗೆ ರೇಚಕ ಪೂರಕವಾದ ಮರುತ ಚರಿಸುತ್ತಿರಲು.
ಸಮಸ್ತ ಪ್ರಾಣಿಗಳ ಅಯುಷ್ಯವು ದಿನದಿನಕ್ಕ ಕುಂದುತ್ತ ಇಹುದು.
ಹೀಂಗೆ ಈಡ ಪಿಂಗಳದಲ್ಲಿ ಚರಿಸುವ ರೇಚಕ ಪೂರಕಂಗಳ
ಭೇದವನರಿದು ಮನ ಪವನಂಗಳ ಮೇಲೆ ಲಿಂಗವ ಸಂಬಂಧಿಸಿ
ಆ ಮನ ಪವನಂಗಳಲ್ಲಿ ಲಿಂಗದೊಡನೆ ಕೂಡಿ
ಲಿಂಗಸ್ವರೂಪ ಮಾಡಿ ವಾಯುಪ್ರಾಣತ್ವವ ಕಳೆದು,
ಲಿಂಗಪ್ರಾಣವ ಮಾಡಿ
ಹೃದಯಕಮಲ ಮಧ್ಯದಲ್ಲಿ ಪ್ರಣವವನುಚ್ಚರಿಸುತ್ತ
ಪರಶಿವಧ್ಯಾನದಲ್ಲಿ ತರಹರವಾಗಿಪ್ಪುದೀಗ ಪ್ರಾಣಾಯಾಮ.
ಇನ್ನು ಪ್ರತ್ಯಾಹಾರಯೋಗ: ಅದಕ್ಕೆ ವಿವರ:
ಆಹಾರದಿಂ ನಿದ್ರೆ, ನಿದ್ರೆಯಿಂ ಇಂದ್ರಿಯಂಗಳು,
ಇಂದ್ರಿಯಂಗಳಿಂದ ವಿಷಯಂಗಳು ಘನವಾಗುತ್ತಿಹುವು.
ಆ ವಿಷಯದಿಂದ ದುಃಕರ್ಮಂಗಳ ಮಿಗೆ ಮಾಡಿ
ಜೀವಂಗೆ ಭವಭವದ ಬಂಧನವ ಒಡನೊಡನೆಗೂಡಿ
ಆಯಾಸಂಬಡುತ್ತಿಪ್ಪರು ಅಜ್ಞಾನಿ ಕರ್ಮಿಗಳು.
ಅದರಿಂದ ಆಹಾರಮಂ ಕ್ರಮ ಕ್ರಮದಿಂದ ಸರ್ವೇಂದ್ರಿಯಂಗಳನು
ಲಿಂಗಮುಖದಿಂದ ಸಾವಧಾನವ ಮಾಡಿಕೊಂಡಿಪ್ಪುದೀಗ
ಪ್ರತ್ಯಾಹಾರಯೋಗ ಈ ಅಷ್ಟಪೂರ್ವಯೋಗಂಗಳು.
ಇನ್ನು ಧ್ಯಾನ ಧಾರಣ ಸಮಾಧಿ ಎಂಬ ಮೂರು ಉತ್ತರ
ಯೋಗಂಗಳು.
ಇನ್ನು ಧ್ಯಾನಯೋಗ: ಅದಕ್ಕೆ ವಿವರ:
ಅಂತರಂಗದ ಶುದ್ಧ ಪರಮಾತ್ಮಲಿಂಗವನೆ
ಶಿವಲಿಂಗ ಸ್ವರೂಪವ ಮಾಡಿ
ಕರಸ್ಥಲಕ್ಕೆ ಶ್ರೀಗುರು ತಂದುಕೊಟ್ಟನಾಗಿ
ಆ ಕರಸ್ಥಲದಲ್ಲಿದ್ಧ ಶಿವಲಿಂಗವೆ ಪರಮಾತ್ಮ ಚಿಹ್ನವೆಂದರಿದು
ಆ ಲಿಂಗವನೆ ಆಧಾರ ಸ್ವಾಧಿಷ್ಠಾನ ಮಣಿಪೂರಕ ಆನಾಹತ ವಿಶುದ್ಧಿ
ಆಜ್ಞೇಯ ಬ್ರಹ್ಮ ಶಿಖಾ ಪಶ್ಚಿಮವೆಂಬ ನವಚಕ್ರಂಗಳಲ್ಲಿ
ಲಿಂಗಮೂರ್ತಿಯನೆ ಆಹ್ವಾನ ವಿಸರ್ಜನೆ ಇಲ್ಲದೆ
ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗ ನಿಃಕಲಲಿಂಗ
ಮಹಾಲಿಂಗ ಪ್ರಸಾದಲಿಂಗ ಶೂನ್ಯಲಿಂಗ ನಿರಂಜನಲಿಂಗವೆಂಬ
ನವಲಿಂಗ ಸ್ವರೂಪದಿಂದ ಧ್ಯಾನಿಸುವುದೀಗ ಧ್ಯಾನಯೋಗ
ಆ ಲಿಂಗವ ಮನಕರಣ ಮುಖವಾದ
ಸರ್ವಾಂದಲ್ಲಿ ಧರಿಸುವುದೀಗ ಧಾರಣಯೋಗ.
ಆ ಸತ್ಕ್ರಿಯಾ ಜ್ಞಾನಯೋಗದಿಂದ
ಪ್ರಾಣಂಗೆ ಶಿವಕಳೆಯ ಸಂಬಂಧಸಿ
ಇಷ್ಟ ಪ್ರಾಣ ಭಾವವೆಂಬ ಲಿಂಗತ್ರಯವನು ಏಕಾಕಾರವ ಮಾಡಿ
ಅಖಂಡ ಪರಿಪೂರ್ಣ ಕೇವಲ ಪರಂಜ್ಯೋತಿ ಸ್ವರೂಪವಪ್ಪ
ಮಹಾಲಿಂಗದೊಳಗೆ ಸಂಯೋಗವಾಗಿ ಭಿನ್ನವಿಲ್ಲದೆ
ಏಕಾರ್ಥವಾಗಿಹುದೀಗ ಸಮಾಧಿಯೋಗ.
ಇಂತೀ ಅಷ್ಟಾಂಗಯೋಗದಲ್ಲಿ ಶಿವಲಿಂಗಾರ್ಚನೆಯ ಮಾಡಿ
ಶಿವತತ್ವದೊಡನೆ ಕೂಡೂದೀಗ ಲಿಂಗಾಂಗಯೋಗವಯ್ಯ
ಶಾಂತವೀರೇಶ್ವರಾ
Art
Manuscript
Music
Courtesy:
Transliteration
Innu aṣṭāṅga yōgaventendoḍe,
yama niyama āsana prāṇāyāma
pratyāhāra dhyāna dhāraṇa samādhi endu ī eṇṭu
aṣṭāṅga yōgāṅgagaḷu.
Ī yōgāṅgagaḷoḷage uttara bhāga pūrvabhāga endu
eraḍu prakāravāgihavayya.
Yamādi pan̄cakavu pūrvayōga.
Dhyāna dhāraṇa samādhi ī mūru uttarayōga
idakke vivara:
Innu yamayōgaḥ adakke vivara, anr̥ta hinse paradhana
parastri paraninde intivaydanu biṭṭu liṅgapūjeya
māḍuvudīga yamayōga,Innu niyama yōga: Adakke vivara,
brahmacāriyāgi nirapēkṣanāgi āgamadharmagaḷalli naḍevuta
śivanindeya koḷade indriyaṅgaḷa nigrahisi mānasa vācaka
upānsikavemba trikaraṇadalli praṇava pan̄cākṣariya smarisutta
cittadalli śuciyāgi aśucitva biṭṭu vibhūti rudrākṣeya dharasi
liṅgārcanā tatparanāgi
pāpakke bhītanāgiruvudīga niyamayōga.
Innu āsanayōga: Adakke vivara,
sid'dhāsana svasthikāsana ardha candrāsana pariyaṅkāsana
Ī aidu āsanayōgaṅgaḷalli susthiranāgi mūrtigoṇḍu
śivaliṅgārcaneya māḍuvudīga āsanayōga.
Innu prāṇāyāma: Adakke vivara,
prāṇapāna vyānōdāna samānavāgi
kūrma kr̥kara dēvadatta dhanan̄jayavemba daśavāyugaḷu.
Prāṇavāyu, indranīla varṇa
hr̥dayasthānadalirdu aṅguṣṭa toḍagi prāṇāgra
śvāsaniśvāsanaṅgaidu
anna jīrṇakaraṇamaṁ māḍuttihudu.
Apāna vāyu, harīta varṇa guda sthānadallirdu
mala mūtraṅgaḷaṁ visarjaneya māḍisi
Adhōdvāramaṁ balidu anna rasa vyāptiyaṁ māḍisuttihudu.
Vyāna vāyu, gōkṣiravarṇa, sarva sandhiyallirdu
nīḍikoṇḍirdudanu muduḍikoṇḍirdudanu anumāḍisi
annapānamaṁ tumbisuttihudu.
Udānavāyu, eḷe min̄cina varṇa, kaṇṭhasthānadallirdu
sīnuva kem'muva kanasukāṇuva ēḷasuta vardhi
nirōdhanaṅgaḷaṁ māḍisi annarasa āhāra
sthāpanaṅgeyisuttihudu.
Samānavāyu, nīlavarṇa, nābhisthānadallirdudu
apāda mastaka pariyantara satprāṇisikoṇḍanthā
annarasamaṁ ella rōmanāḷagaḷige han̄cikkuttihudu.
Ī aydu prāṇapan̄caka.
Innu nāgavāyu pītavarṇa,
Rōmanāḷaṅgaḷallirdu calane illade āḍisuttihudu
kūrma vāyu śvētavarṇa, udara lalāṭadallirdu
śarīramaṁ tāḷdu dēhamaṁ puṣṭhiyaṁ māḍikoṇḍu bāya
muccutta terevutta nētradalli unmīlanamaṁ māḍisuttihudu.
Kr̥kara vāyu an̄janavarṇa, nāsikāgradallirdu kṣudhādi
dharmaṅgaḷa gamanāgamanaṅgaḷaṁ mūḍisuttihudu.
Dēvadatta vāyu spaṭika varṇa. Kaṭisthānaṅgaḷallirdu kuḷḷirdalli
malagisi malagirdalli ēḷisi nindirisi, cētarisi orali
mātanāḍisuttihudu.
Dhanan̄jayavāyu nīlavarṇa,
Brahmarandhrallirdu karṇadalli samudra ghōṣamaṁ ghōṣisi
maraṇagālakke nighōṣamappudu.
Ī prakāradalli mūlavāyu ende.
Sarvatōmukhavāgi calisuttihudu.
Ā pavanadoḍane prāṇa kūḍi ā prāṇadoḍane pavana kūḍi
hr̥daya sthānadalli nindu hansanenisikoṇḍu
ādhāra svādhīṣṭhāna maṇipūraka
anāhuta viśud'dhi ājñēyavemba
ṣaḍucakraṅgaḷa mēle suḷidu
navanāḷaṅgaḷoḷage carisuttihudu.
Aṣṭadaḷaṅgaḷe aśrayavāgi aṣṭadaḷaṅgaḷanu meṭṭi carisuva
hansanu aṣṭadaḷaṅgaḷinda viśud'dhicakravaneydi
allinda nāsikāgradalli hadināraṅgula pramāṇa
horasūsuttippudu.
Hanneraḍaṅgula pramāṇu oḷage tumbuttihudu.
Hīṅge rēcaka pūrakavāda maruta carisuttiralu.
Samasta prāṇigaḷa ayuṣyavu dinadinakka kundutta ihudu.
Hīṅge īḍa piṅgaḷadalli carisuva rēcaka pūrakaṅgaḷa
bhēdavanaridu mana pavanaṅgaḷa mēle liṅgava sambandhisi
ā mana pavanaṅgaḷalli liṅgadoḍane kūḍi
liṅgasvarūpa māḍi vāyuprāṇatvava kaḷedu,
Liṅgaprāṇava māḍi
hr̥dayakamala madhyadalli praṇavavanuccarisutta
paraśivadhyānadalli taraharavāgippudīga prāṇāyāma.
Innu pratyāhārayōga: Adakke vivara:
Āhāradiṁ nidre, nidreyiṁ indriyaṅgaḷu,
indriyaṅgaḷinda viṣayaṅgaḷu ghanavāguttihuvu.
Ā viṣayadinda duḥkarmaṅgaḷa mige māḍi
jīvaṅge bhavabhavada bandhanava oḍanoḍanegūḍi
āyāsambaḍuttipparu ajñāni karmigaḷu.
Adarinda āhāramaṁ krama kramadinda sarvēndriyaṅgaḷanu
liṅgamukhadinda sāvadhānava māḍikoṇḍippudīga
Pratyāhārayōga ī aṣṭapūrvayōgaṅgaḷu.
Innu dhyāna dhāraṇa samādhi emba mūru uttara
yōgaṅgaḷu.
Innu dhyānayōga: Adakke vivara:
Antaraṅgada śud'dha paramātmaliṅgavane
śivaliṅga svarūpava māḍi
karasthalakke śrīguru tandukoṭṭanāgi
ā karasthaladallid'dha śivaliṅgave paramātma cihnavendaridu
ā liṅgavane ādhāra svādhiṣṭhāna maṇipūraka ānāhata viśud'dhi
ājñēya brahma śikhā paścimavemba navacakraṅgaḷalli
liṅgamūrtiyane āhvāna visarjane illade
Ācāraliṅga guruliṅga śivaliṅga jaṅgamaliṅga niḥkalaliṅga
mahāliṅga prasādaliṅga śūn'yaliṅga niran̄janaliṅgavemba
navaliṅga svarūpadinda dhyānisuvudīga dhyānayōga
ā liṅgava manakaraṇa mukhavāda
sarvāndalli dharisuvudīga dhāraṇayōga.
Ā satkriyā jñānayōgadinda
prāṇaṅge śivakaḷeya sambandhasi
iṣṭa prāṇa bhāvavemba liṅgatrayavanu ēkākārava māḍi
akhaṇḍa paripūrṇa kēvala paran̄jyōti svarūpavappa
mahāliṅgadoḷage sanyōgavāgi bhinnavillade
ēkārthavāgihudīga samādhiyō. Intī aṣṭāṅgayōgadalli śivaliṅgārcaney
śivatatvadoḍane kūḍūdīga liṅgāṅgayōgavayya
śāntavīrēśvarā
.