ಇನ್ನು ಕರ್ಮಕಾಂಡಿಗಳು ಮಾಡುವ ಕರ್ಮಯೋಗಂಗಳು
ಆವಾವವೆಂದರೆ,
ಯಮ ನಿಯಮ ಆಸನ ಪ್ರಾಣಾಯಾಮ ಪ್ರತ್ಯಾಹಾರವೆಂಬ
ಈ ಅಯ್ದನೂ ಲಿಂಗವಿರಹಿತವಾಗಿ ಮಾಡುತಿಪ್ಪರಾಗಿ
ಈ ಐಯ್ದು ಕರ್ಮಯೋಗಂಗಳು.
ಅವರು ಲಕ್ಷಿಸುವಂಥ ವಸ್ತುಗಳು ಉತ್ತರಯೋಗವಾಗಿ
ಮೂರು ತೆರ, ಅವಾವೆಂದಡೆ:
ನಾದಲಕ್ಷ್ಯ, ಬಿಂದು ಲಕ್ಷ್ಯ ಕಲಾಲಕ್ಷ್ಯವೆಂದು ಮೂರು ತೆರ.
ನಾದವೆ ಸಾಕ್ಷಾತ್ ಪರತತ್ವವೆಂದು ಲಕ್ಷಿಸುವರು.
ಬಿಂದುವೆ ಅಕಾರ ಉಕಾರ ಮಕಾರ ಈ ಮೂರು
ಶುದ್ಧಬಿಂದು ಸಂಬಂಧವೆಂದು, ಆಶುದ್ಧ ಬಿಂದುವೆ
ಕೇವಲ ದಿವ್ಯ ಪ್ರಕಾಶವನುಳ್ಳದೆಂದು ಲಕ್ಷಿಸುವರು.
ಕಲೆಯು ಚಂದನ ಹಾಂಗೆ ಸೂರ್ಯನ ಕಿರಣಗಳು ಹಾಂಗೆ
ಮಿಂಚುಗಳು ಪ್ರಕಾಶದ ಹಾಂಗೆ ಮುತ್ತು ಮಾಣಿಕ್ಯ ನವರತ್ನದ ದೀಪ್ತಿಗಳ
ಹಾಂಗೆ ಪ್ರಕಾಶಮಯವಾಗಿಹುದು ಎಂದು ಲಕ್ಷಿಸುವುದೀಗ ಕಳಾ ಲಕ್ಷ್ಯ.
ಈ ಎಂಟು ಇತರ ಮತದವರು ಮಾಡುವ ಯೋಗಂಗಳು.
ಇವು ಲಿಂಗವಿರಹಿತರಾಗಿ ಮಾಡುವರಾಗಿ ಕರ್ಮಯೋಗಂಗಳು.
ಈ ಕರ್ಮ ಕೌಶಲದಲ್ಲಿ ಲಿಂಗವಿಲ್ಲ
ಇವು ಕಾರಣ ಇವ ಮುಟ್ಟಲಾಗದು.
ಇನ್ನು ವೀರಮಾಹೇಶ್ವರರುಗಳು ಲಿಂಗಸಂಬಂದವೆಂತೆದೊಡೆ,
ಬ್ರಹ್ಮರಂಧ್ರದಲ್ಲಿ ನಾದಚೈತನ್ಯವಪ್ಪ ಪರಮ ಚಿತ್ಕಲೆಯನೆ
ಭಾವ ಮನ ಕರದಲ್ಲಿ ಶ್ರೀ ಗುರು ತಂದು ಸಂಬಂಧವ ಮಾಡಿದನಾಗಿ
ಭಾವದಲ್ಲಿ ಸತ್ತು ಸ್ವರೂಪವೆನಿಪ ಭಾವಲಿಂಗವೆನಿಸಿ
ಪ್ರಾಣದಲ್ಲಿ ಚಿತ್ತು ರೂಪವಪ್ಪ ಪ್ರಾಣಲಿಂಗವೆನಿಸಿ
ಕರಸ್ಥಲದಲ್ಲಿ ಆನಂದ ಸ್ವರೂಪವಪ್ಪ ಇಷ್ಟಲಿಂಗವೆನಿಸಿ
ಒಂದು ವಸ್ತು ತನು ಮನ ಭಾವಂಗಳಲ್ಲಿ
ಇಷ್ಟ ಪ್ರಾಣ ಭಾವವಲ್ಲದ ಭೇದವನೆ ಕೂಡಿ
ತಾನಾಗಿಪ್ಪುದೀಗ ಶಿವಯೋಗವಯ್ಯ
ಶಾಂತವೀರೇಶ್ವರಾ