Index   ವಚನ - 709    Search  
 
ಅಷ್ಟ ಮದವೆಂಬಾನೆಯ ಮೆಟ್ಟಿ ಅವಿನಾಶವೆಂಬ ಕಂಥೆಯ ತೊಟ್ಟು ಅನಾಹತವೆಂಬ ಕರ್ಪರವ ಕೊಂಡು ಅಕಾಯ ಕಲ್ಪಿತವೆಂಬ ಯೋಗದಂಡವ ಪಿಡಿದು, ಕಾಯ ಕಲ್ಪಿತ ಜೀವನೋಪಾಯವನತಿಗಳೆದು ಮಾಯಾ ಪ್ರಪಂಚು ನಾಸ್ತಿಯಾಗಿ ಶಿವಧ್ಯಾನ ಕಾರಣ ಸದಾಚಾರವೆಡೆಗೊಂಡು ಸಮ್ಯಜ್ಞಾನವೆಂಬ ಶಿವಪುರಮಂ ಪೊಕ್ಕು ಸಮತೆ ಎಂಬ ಓಗರವನೆತ್ತುತ್ತ ಸಕಲ ಜೀವರುಗಳ ಉಪಪಾತಕ ಕೋಟಿ ಬ್ರಹ್ಮಹತ್ಯಾದಿ ಅಶೇಷ ಪಾಪಂಗಳನು ದಹಿಸುತ್ತೆ ಸುಳಿವನಯ್ಯ ಶಾಂತವೀರೇಶ್ವರಾ ಸೂತ್ರ: ಈ ಪ್ರಕಾರದಿಂದ ಸ್ವಯಂಚರಪರವೆಂಬ ತ್ರಿವಿಧ ಸ್ಥಲವು ವೃತ್ತ ಗೋಮುಖ ಗೋಳಕಾಕಾರದಿಂದೇಕವಾದಾ ಲಿಂಗವು ವೀರ ಮಾಹೇಶ್ವರನಂಗದೊಳು ಸತ್ಕ್ರೀಯಲ್ಲಿ ಆಗಮ ಸ್ವರೂಪವನೆಯ್ದಿದ ಭೇದವೆಂತ್ತಿದ್ದಿತೆಂದೊಡೆ ಮುಂದೆ ‘ಕ್ರಿಯಾಗಮಸ್ಥಲ’ವಾದುದು.