ಜೀವನ್ಮುಕ್ತನಾದ ಶರಣಂಗೆ
ಸಂಚಿತ ಪ್ರಾರಬ್ಧ ಆಗಾಮಿಯೆಂಬ
ಕರ್ಮಂಗಳನರಿವ ತೆರೆನಾವುದುಯೆಂದಡೆ:
ಜ್ಞಾನಾಗ್ನಿಯಿಂದ ಸುಡಬಲ್ಲ ಸುಂಕಿನಂತೆ ಉರಿದು ಹೋಗೂದು.
ಪ್ರಾರಬ್ಧ ಉಂಡಲ್ಲದೆ ತೀರದು.
ಆಗಾಮಿಯಂದಧಿಕಾರಿಯಪ್ಪುದರಿಂದ ಫಲಿಸುತ್ತಿರದು ನೋಡಾ.
ಅದೆಂತೆಂದಡೆ:
ಜ್ಞಾನಾಗ್ನಿಯಿಂದ ದಗ್ಧವಾದ ಕರ್ಮವೆ ಪ್ರಾರಬ್ಧವನೀವುದರಿಂದ
ಮುಂದೆ ದೇಹೋತ್ಪತ್ತಿಯನು ಮಾಡಲುಳ್ಳುದೆಂದಡೆ
ಹುರಿದ ಚಣಕಾದಿ ಬೀಜವು ಭೋಗಕ್ಕೆ ಯೋಗ್ಯವಲ್ಲದೆ
ಅಂಕುರೋತ್ಪತ್ತಿಗೆ ಕಾರಣವಿಲ್ಲದಂತೆ,
ಜ್ಞಾನಿಯ ಕರ್ಮವೆ ಪ್ರಾರಬ್ಧದಿಂದ
ಜನ್ಮಾಂತರಕ್ಕೆ ಕಾರಣವಲ್ಲ ನೋಡಾ.
ಆ ಶರಣನು ದೃಷ್ಟವೆಂಬ ಪರಿಚಾರಕನಿಂದತ್ತಮಾದ
ಶ್ರಕ್ಚಂದನಾದಿ ಭೋಗಸ್ವೀಕಾರವಿರ್ದೊಡಂ
ನಿಜಭೃತ್ಯುವಿನೊಳ್ಸುರತಂಗೈವ ಪುಂಜಲಿಯಂತೆ
ಪರಾಕದೆಯಪ್ಪುದು ನೋಡಾ.
ಆ ಶರಣನು ಮೂಢನಂತೆ
ಕಲಾಭಿಘ್ಞತೆಯೊಳ್ಮೌನಗೊಂಡಿರ್ದೊಡಂ ಕಲ್ಪಿತ ದ್ವೈತಪರ
ಶ್ರುತಿವಾಕ್ಯವೈಶ್ರುತಿವಿಷಯದೊಳಸಮನಪ್ಪ ನೋಡಾ.
ಶರಣ ತಾನು ಪ್ರಸ್ತುವನರಿಯದ ಬಹುಭಾಷಣನಂತೆ
ಏನನುಡಿದೊಡೆದೆ ಗೂಢಭಿಪ್ರಾಯ ಗರ್ಭಿತವಾದ
ಸತ್ಯದ್ವೈತನಿಷ್ಠೆ ನಿಗಮಾದಿ ಪ್ರಾಯಮಪ್ಪುದು ನೋಡಾ.
ಆ ಶರಣನು ಆಚಾರ್ಯನಂತೆ
ಶಿಷ್ಯರನುಪದೇಶಿಸುತಿರ್ದೊಡೆಯಾತ್ಮನು ನಿತ್ಯಮುಕ್ತನಪ್ಪುದರಿಂದ
ಬೋಧ್ಯ ಬೋಧಕತ್ವವೆ ಮಾಯಾರಚನೆಯೆಂಬ ಕೃತನಿಶ್ಚಯದಿಂ
ಗಗನವಾಣಿಯಂತೆ ಗುರುತ್ವಾಭಿಮಾನ ಹಿತನಪ್ಪ ನೋಡಾ.
ಆತನು ಉನ್ಮತ್ತನಂತೆ ಅನುಚಿತವಕ್ತ್ರವಾದೊಡಂ
ದ್ವೈತಭಾವವಳಿದಾತ್ಮರಾಮನಪ್ಪುದರಿಂದ
ಸುರತಾಂತ್ಯಸಮಯದೊಳಕಾಮಶಕ್ತಿಮಿಥುನವಾಕ್ಯದಂತೆ
ನಂಬಿ ದೇಹ ವಿಷಯವಪ್ಪುದು ನೋಡಾ.
ಆ ಶರಣನು ಪಿಶಾಚಗ್ರಹವಿಷ್ಟನಂತೆ
ಗಳಗಳನೆ ನಡೆದೊಡಂ ಪೂರ್ಣೈಕಸ್ವಭಾವನಿಷ್ಠನಪ್ಪುದರಿಂದ
ವಿರಯಗಮನದಂತೆ ಪ್ರಾಪ್ಯನುಸಂಧಾನನಪ್ಪ ನೋಡಾ.
ಆ ಶರಣನು ಪುತ್ರಯೋಗನುಭವವನುಳ್ಳ ಗ್ರಾಮ್ಯಜನಕನಂತೆ
ಶೋಕಂಗೈಯಲದೆ ಸರ್ವೇಂದ್ರಿಯಂಗಳು
ಬ್ರಹ್ಮಾಂಶಗಳೆಂದು ಆಳೋಚನಂಗೈಯಲದೆ
ಕಲ್ಪಿತ ಸಾಧಕಾವಸ್ಥೆಯೊಳ್ದಂಡಿತ ಸರ್ವೆಂದ್ರಿಯಧರ್ಮವಿಷಯವಾದ
ಕರುಣರಸವಪ್ಪುದು ನೋಡಾ.
ಆ ಶರಣನು ವಿಕೃತಬಹುರೂಪವಾದರುಶನ
ವಿನೋದದೊಳಟ್ಟಹಾಸಂಗೈದೊಡಂ
ವಿಚಿತ್ರ ಪುಣ್ಯಪಾಪಾದಿ ವ್ಯವಹಾರಮಂ ಸತ್ಯವೆಂದು ಪ್ರತಿಪಾದಿಪ
ಮೀಮಾಂಸಾದಿ ದರ್ಶನ ವಿಷಯವಾದ
ಪರಿಹಾಸಮಪ್ಪುದು ನೋಡಾ.
ಶರಣ ತಾನು ವಿಟನಂತೆ ಸ್ತ್ರೀಲೋಲನಾಗಿರ್ದೊಡಂ
ಪೂರ್ಣೈಕಸ್ವಭಾವನಪ್ಪುದರಿಂದ
ನಿಜಾನಂದಾನುಭಾವಿಯಪ್ಪ ನೋಡಾ.
ಆ ಶರಣನು ಶತ್ರುವಿನಂತೆ ಆವಾತನಂ ಕ್ರೋಧದಿಂ
ಸಂತಾಪಬಡಿಸಿದಡಂ
ಕ್ಞೇತ್ರದಾಹಾಗ್ನಿಯಂತೆ ವಿಶಿಷ್ಟಫಲಸಂಪತ್ತಿಗಾತನ
ಆಶ್ರಯಂ ಮಾಡುವಾತನೆಂದು ವಿಶ್ವಾಸಂಗೈವುದು ನೋಡಾ.
ಅಂತಪ್ಪ ಶರಣ ಆವ ಕಾಲದಲ್ಲಿಯು ಶರೀರಂಬಡೆಯದೆ
ಸಚ್ಚಿದಾನಂದ ಬ್ರಹ್ಮವಪ್ಪುದರಿಂದ
ಆ ಶರಣನ ದೇಹವೆ ಕೈಲಾಸವಪ್ಪುದು ತಪ್ಪದು ಕಾಣಾ
ಶೂನ್ಯನಾಥಯ್ಯ.
Art
Manuscript
Music
Courtesy:
Transliteration
Jīvanmuktanāda śaraṇaṅge
san̄cita prārabdha āgāmiyemba
karmaṅgaḷanariva terenāvuduyendaḍe:
Jñānāgniyinda suḍaballa suṅkinante uridu hōgūdu.
Prārabdha uṇḍallade tīradu.
Āgāmiyandadhikāriyappudarinda phalisuttiradu nōḍā.
Adentendaḍe:
Jñānāgniyinda dagdhavāda karmave prārabdhavanīvudarinda
munde dēhōtpattiyanu māḍaluḷḷudendaḍe
hurida caṇakādi bījavu bhōgakke yōgyavallade
aṅkurōtpattige kāraṇavilladante,
jñāniya karmave prārabdhadinda
janmāntarakke kāraṇavalla nōḍā.Ā śaraṇanu dr̥ṣṭavemba paricārakanindattamāda
śrakcandanādi bhōgasvīkāravirdoḍaṁ
nijabhr̥tyuvinoḷsurataṅgaiva pun̄jaliyante
parākadeyappudu nōḍā.
Ā śaraṇanu mūḍhanante
kalābhighñateyoḷmaunagoṇḍirdoḍaṁ kalpita dvaitapara
śrutivākyavaiśrutiviṣayadoḷasamanappa nōḍā.
Śaraṇa tānu prastuvanariyada bahubhāṣaṇanante
ēnanuḍidoḍede gūḍhabhiprāya garbhitavāda
satyadvaitaniṣṭhe nigamādi prāyamappudu nōḍā.
Ā śaraṇanu ācāryanante
Śiṣyaranupadēśisutirdoḍeyātmanu nityamuktanappudarinda
bōdhya bōdhakatvave māyāracaneyemba kr̥taniścayadiṁ
gaganavāṇiyante gurutvābhimāna hitanappa nōḍā.
Ātanu unmattanante anucitavaktravādoḍaṁ
dvaitabhāvavaḷidātmarāmanappudarinda
suratāntyasamayadoḷakāmaśaktimithunavākyadante
nambi dēha viṣayavappudu nōḍā.
Ā śaraṇanu piśācagrahaviṣṭanante
gaḷagaḷane naḍedoḍaṁ pūrṇaikasvabhāvaniṣṭhanappudarinda
virayagamanadante prāpyanusandhānanappa nōḍā.
Ā śaraṇanu putrayōganubhavavanuḷḷa grāmyajanakanante
śōkaṅgaiyalade sarvēndriyaṅgaḷu
brahmānśagaḷendu āḷōcanaṅgaiyalade
kalpita sādhakāvastheyoḷdaṇḍita sarvendriyadharmaviṣayavāda
karuṇarasavappudu nōḍā.
Ā śaraṇanu vikr̥tabahurūpavādaruśana
vinōdadoḷaṭṭahāsaṅgaidoḍaṁ
vicitra puṇyapāpādi vyavahāramaṁ satyavendu pratipādipa
mīmānsādi darśana viṣayavāda
parihāsamappudu nōḍā.
Śaraṇa tānu viṭanante strīlōlanāgirdoḍaṁ
pūrṇaikasvabhāvanappudarinda
nijānandānubhāviyappa nōḍā.
Ā śaraṇanu śatruvinante āvātanaṁ krōdhadiṁ
santāpabaḍisidaḍaṁ
kñētradāhāgniyante viśiṣṭaphalasampattigātana
āśrayaṁ māḍuvātanendu viśvāsaṅgaivudu nōḍā.
Antappa śaraṇa āva kāladalliyu śarīrambaḍeyade
saccidānanda brahmavappudarinda
ā śaraṇana dēhave kailāsavappudu tappadu kāṇā
śūn'yanāthayya.