ನಾದವೆಂಬ ಶುದ್ಧಪ್ರಸಾದ
ಮಂತ್ರನಾಮವಾದ ಹಕಾರವೆಂಬ ಶಿವಬೀಜವು
ಸಕಲ ಪ್ರಾಣಿಗಳಲ್ಲಿ ಅಂತಸ್ಥವಾಗಿಹುದು ನೋಡಾ.
ಅದ ಆವಾತನರಿದಾನು ಆತನು ಶಿಷ್ಯರ ಭವಪಾಶವ
ನಾಶಮಾಡುವುನು.
ಆ ಹಕಾರವೆಂಬ ಶಿವಬೀಜ ಸಕಲಾಗಮಾದಿಗಳಲ್ಲಿಯು
ಪ್ರಸಿದ್ಧ ನೋಡಾ.
ಅದು ತಾನೆ ಚತುಃಶಕ್ತಿಸಮೇತವಾಗಿ ಪ್ರಾಣವಾಯಿತ್ತು.
ಅದೆಂತೆಂದಡೆ:
ಅಕಾರ ಉಕಾರ ಮಕಾರ ಒಕಾರವೆಂಬ ನಾಲ್ಕರೊಡನೆ ಕೂಡಿದ
ಶಿವಬೀಜಂ ಪ್ರಣಮಸ್ವರೂಪವೇ ಹೇಂಗಾಯ್ತಿತ್ತೆಂದಡೆ,
ಆಕಾರ ಉಕಾರವೆಂಬೆರಡಕ್ಷರ ಕೂಟದಿಂದ ಓ ಎಂಬ
ವರ್ಣವಾಯಿತ್ತು.
ಮಕಾರ ಬಿಂದು ರೂಪವಾಯಿತ್ತು.
ಈ ಬಿಂದು ಕೂಡಲೊಡನೆ ‘ಓಂ’ ಎಂಬ ಪ್ರಣವವಾಯಿತ್ತಯ್ಯ.
ಈ ಪ್ರಣವದೊಳು ನಾದಬ್ರಹ್ಮ ಪೂರ್ಣವಾಗಿಹುದು.
ಇಂತು ಆಕಾರ ಉಕಾರ ಮಕಾರ ಒಕಾರ ಹಕಾರವೆಂಬೈದಕ್ಷರಗಳ
ಕೂಟವೆ ಜಗಜ್ಜನನಕ್ಕೆ ಕಾರಣವಾದ ಪ್ರಣವಬೀಜವು ಸಂಭವಿಸಿದ
ಪಂಚಾಕ್ಷರವೆ ಸೂಕ್ತ ಪಂಚಾಕ್ಷರವೆನಿಸಿತ್ತು.
ಅದೆಂತೆಂದೊಡೆ:
ಹಾಂಗೆ ಪರಶಿವನು ಪಂಚನಿಃಕಲೆಯೊಡನೆ ಕೂಡಿಹನು,
ಹಾಂಗೆ ಸಕಲವಪ್ಪುದೆ ಕಾರಣವಾಗಿ, ಸರ್ವತ್ರ ಪ್ರವರ್ತನೆಯಪ್ಪ
ಶಾಂತ್ಯತೀತವೆಂಬ ಕಲೆಯುಂ ಪುಟ್ಟಿಸಿದನು ನೋಡಾ.
ಓಂಕಾರ ಮಸ್ತಕದಲ್ಲಿ ತಾನಿರುವ ಓಂಕಾರವರ್ಣವ್ಯಾಪಕನಾಗಿಹನು.
ಆ ಪರಶಿವನು ಪ್ರಣವಪ್ರಥಮ ರೇಖೆಯಪ್ಪ
ಆಕಾರಮಂ ಸೃಜಿಸಿದನು.
ಆ ಕಾಲರೇಖೆಯೆಂಬ ಕಲೆಯೆನಿಸಿಕೊಂಬುದಯ್ಯ.
ಅದು ಎಲ್ಲಾ ವರ್ಣಂಗಳೊಳಗೆ ಇರುತ್ತಿಹುದು ನೋಡಾ.
ಆ ಅಕಾರವಿಲ್ಲದೆ ಆ ವರ್ಣಂಗಳು ಉಚ್ಚರಣಕ್ಕೆ ಬಾರವು.
ಓಂಕಾರವಾವುದಾನೊಂದು ಉಕಾರ ರೇಖೆಯುಂಟು.
ಅದು ಪ್ರತಿಷ್ಠಾಕಲೆಯೆನಿಸಿತ್ತು;
ಆ ಕಲೆ ಉಕಾರದಿಂದ ಹುಟ್ಟಿತ್ತು ನೋಡಾ.
ಆ ಪ್ರಣಮದ ಮಸ್ತಕದಲ್ಲಿ ನಿರಂಜನ ರೇಖೆಯುಂಟು.
ಅದು ಮಕಾರದ ದೆಸೆಯಿಂದ ಹುಟ್ಟಿತ್ತು;
ಆ ರೇಖೆ ನಿವೃತ್ತಿ ಕಲೆಯೆನಿಸಿತ್ತು ನೋಡಾ.
ಓಂಕಾರದ ಶಿರಸ್ಸಿನೊಡನೆ ಕೂಡಿದ ನಾದಬ್ರಹ್ಮದಲ್ಲಿಯೊಂದು
ಸ್ಥಲವಾದ ನಿರ್ವಾಣರೇಖೆಯುಂಟು;
ಅದು ಶಾಂತಿಕಲೆಯೆನಿಸಿತ್ತು ನೋಡಾ.
ಆ ಶಾಂತಿಕಲಾಬೀಜವೆ ಅಕಾರ ಉಕಾರಂಗಳ ಕೂಟವನ್ನುಳ್ಳ
ಓಂಕಾರವೆಂಬ ಶಾಂತಿಕಲೆಯು ನಿಃಕಲಬ್ರಹ್ಮದಲ್ಲಿಯು
ಸಕಲಬ್ರಹ್ಮದಲ್ಲಿಯ ಇರುತ್ತಿಹುದು.
ಬಿಂದುನಾದವನುಳ್ಳ ಶಾಂತ್ಯತೀತೆಯೆಂಬ
ಪರಶಕ್ತಿಯೊಡನೆ ಕೂಡಿ
ಪರಮಸೂಕ್ಷ್ಮವಾದ ಶಾಂತ್ಯತೀತ ಕಲೆಯೆ
ಓಂಕಾರ ಶಿರಃಕ್ರಾಂತವಾಗಿಹುದು ನೋಡಾ.
ಆ ಶಾಂತಿ ಕಲೆಯಲ್ಲಿ ಶಬ್ದಪ್ರಪಂಚು ಹುಟ್ಟಿತ್ತು.
ಅದೆಂತೆಂದೊಡೆ:
ದೀಪದಿಂದ ವಿಸ್ಫುಲಿಂಗ ತೇಜಸ್ಸುಗಳು ಹೇಂಗೆ ಹುಟ್ಟಿಹವು
ಹಾಂಗೆ ಸಕಲವಾದ ಶಿವತತ್ವದೊಡನೆ ಕೂಡಿದ ಶಾಂತಿಕೆಲೆಯೇ
ಶಿವ ವಿದ್ಯಾ ಜೀವರುಗಳೆಂಬ ತ್ರಿರೂಪಂಗಳೊಡನೆ
ಮೂರು ಪ್ರಕಾರವಾಗಿಯೆಯ್ದುದು ಕಾಣಾ
ಶೂನ್ಯನಾಥಯ್ಯ.