ಶಿವಜ್ಞಾನವಿಲ್ಲದ ಕಾರಣ ಇಪ್ಪತ್ತೊಂದು ಲಕ್ಷ ಬಾರಿ
ಬೆಟ್ಟವಾಗಿ ಕಲ್ಲಾಗಿ ಮರನಾಗಿ ಭೂಮಿಯಾಗಿ ಸಮುದ್ರವಾಗಿ,
ಗುರುಕರುಣವಲ್ಲದ ಕಾರಣ ಸಮುದ್ರದೊಳಗಣ ಕ್ರಿಮಿಯಾಗಿ
ಕೆರೆಯೊಳಗಣ ಕ್ರಿಮಿಯಾಗಿ, ತೊರೆಯೊಳಗಣ ಕ್ರಿಮಿಯಾಗಿ
ಭೂಮಿಯೊಳಗಣ ಕ್ರಿಮಿಯಾಗಿ, ದೇಹದೊಳಗಣ ಕ್ರಿಮಿಯಾಗಿ
ಈ ಹೀಂಗೆ ಹನ್ನೊಂದು ಲಕ್ಷ ಬಾರಿ ಬಂದೆನು.
ಪಕ್ಷಿಗಳ ಜನ್ಮದಲ್ಲಿ ನವಲಕ್ಷ ಬಾರಿ ಬಂದೆನು,
ಪಶುಗಳ ಜನ್ಮದಲ್ಲಿ ಏಳುಕೋಟಿ ಬಾರಿ ಬಂದೆನು.
ನೂರೊಂದು ಕುಲ ಹದಿನೆಂಟು ಜಾತಿಗಳು ಜನ್ಮದಲ್ಲಿ
ನಾಲ್ಕು ಲಕ್ಷ ಬಾರಿ ಬಂದೆನು.
ಬ್ರಹ್ಮ ನೂರು ವೇಳೆ ಸತ್ತುಹುಟ್ಟುವ ಪರ್ಯಂತರ
ಸಪ್ತಜನ್ಮ ಮುಖ್ಯವಾದ ನಾನಾ ಜನ್ಮಂಗಳಲ್ಲಿ ಬಂದೆನು.
ಅದೇನು ಕಾರಣವೆಂದಡೆ:
ಗುರು ಮಲಿಂಗ ಜಂಗಮದ ಪಾದೋದಕ ಪ್ರಸಾದ
ವಿಭೂತಿ ರುದ್ರಾಕ್ಷಿ ಪ್ರಣವ ಪಂಚಾಕ್ಷರ
ಇಂತಿವನರಿಯದ ದೆಸೆಯಿಂದವು, ಸಂಚಿತಾದಿ ಕರ್ಮದಿಂದವು
ಮನಸ್ಸು ಜ್ಞಾನವಿಲ್ಲದ ಭ್ರಮೆಯಿಂದವು,
ತನುವಿನ ದೆಸೆಯಿಂದಲು
ನಾನಾ ಪರಿಭವಂಗಳಲ್ಲಿ ಬಂದೆನಯ್ಯ.
ಆ ತನುವಿನ ವ್ಯಾಪ್ತಿಗಳಾವವೆಂದಡೆ:
ಇನ್ನೂರಾ ಹದಿನಾರು ಕರಣಂಗಳು,
ಏಳುನೂರಾ ಎಪ್ಪತ್ತು ಸಾವಿರ ನಾಡಿಗಳು
ಆರುವರೆಕೋಟಿ ಅರಿಷಡ್ವರ್ಗಂಗಳು.
ಮೂರುಕೋಟಿ ಇಂದ್ರಿಯಂಗಳು
ಇಂತಿವರಲ್ಲಿ ಮತ್ತನಾದ ಕಾರಣ,
ಎಂಬತ್ತನಾಲ್ಕು ಲಕ್ಷ ಪ್ರಾಣಿಗಳಲ್ಲಿ ತಿರುತಿರುಗಿ,
ಯಮನಿರುವ ಲೋಕಪರ್ಯಂತರ
ಕಾಲಚಕ್ರ[ದಲ್ಲಿ] ಬರುತ್ತಿದ್ದೇನಯ್ಯ.
ಅದೆಂತೆಂದೊಡೆ:
ಶಿವಕೃಪೆಯಿಂದ ಶಿವಜ್ಞಾನ ತಲೆದೋರಿ ಶ್ರಿಗುರುವ ಕಂಡು
ದೀರ್ಘದಂಡ ನಮಸ್ಕಾರವಂ ಮಾಡಿ,
ಕರಕಮಲಮಂ ಮುಗಿದುಕೊಂಡು
‘ಎಲೆ ಸ್ವಾಮಿ ನಿಮ್ಮನರಿಯದ ಕಾರಣ
ನಾನಾ ಭವಂಗಳಲ್ಲಿ ಬಂದೆನು
ಎಲೆ ದೇವಾ ನಿಮ್ಮ ಪಾದಾಂಬುಜವ ಕಂಡು ಬದುಕಿದೆನಯ್ಯ
ಎನಗೆ ಲಿಂಗೋಪದೇಶವ ಮಾಡಯ್ಯ’ ಎಂದು
ಪಾದಾಕ್ರಾಂತನಾಗಿ ಪ್ರಳಾಪಿಸುತ್ತಿರಲು
ಆತನ ಸಂಸ್ಕಾರವನಿರಿದು ‘ಮಗೆನೆ ಬಾ’ ಎಂದು, ತನ್ನ ಶ್ರೀಹಸ್ತದಿಂದ
ಎತ್ತಿ ಕುಳ್ಳಿರಿಸಿ
ಕೃಪಾದೃಷ್ಠಿಯಿಂದ ನೋಡಲಾಗಿ, ಅಂತಃಕರಣಗಳು ನಷ್ಟವಾಗಿ, ಚಿತ್ರದ
ರೂಹಿನಂತೆ ಇರಲಾಗಿ
ಆ ಶ್ರೀಗುರು ವೇಧಾ ಮಂತ್ರ ಕ್ರಿಯಾ ದೀಕ್ಷೆ ಕರುಣಿಸಿದ.
ಅದೆಂತೆಂದೊಡೆ:
ವೇಧಾ ದೀಕ್ಷೆಯಿಂದ ಕಾರಣ ತನುವಿಗೆ
ಭಾವಲಿಂಗವನು ಉಪದೇಶವ ಮಾಡಿದನು.
ಮಂತ್ರದೀಕ್ಷೆಯಿಂದ ಸೂಕ್ಷ್ಮ ತನುವಿಗೆ
ಪ್ರಾಣಲಿಂಗವನು ಉಪದೇಶವ ಮಾಡಿದನು.
ಕ್ರಿಯಾ ದೀಕ್ಷೆಯಿಂದ ಸ್ಥೂಲತನುವಿಗೆ
ಇಷ್ಟಲಿಂಗವನು ಉಪದೇಶವ ಮಾಡಲಾಗಿ,
ಸಂಸಾರ ಭಯ ಕೆಟ್ಟುಹೋಯಿತ್ತಾಗಿ,
ಶ್ರೀಗುರುವಿನ ಕರುಣದಿಂದ
ಎನ್ನ ಜನ್ಮ ಸಫಲವಾಯಿತ್ತು ಕಾಣಾ
ಶೂನ್ಯನಾಥಯ್ಯ.