Index   ವಚನ - 9    Search  
 
ಮಠಸ್ಥಲದ ಭೇದವೆಂತೆಂದೊಡೆ: ಅನಾದಿಯಲ್ಲಿ ಪರಶಿವನು ತನ್ನ ಲೀಲೆಯಿಂದ ಸಚರಾಚರಗಳ ನಿರ್ಮಿಸಿದ. ಅದೆಂತೆಂದೊಡೆ: ಬ್ರಹ್ಮ ವಿಷ್ಣು ಇಂದ್ರ ಮುನಿಜನಂಗಳು ಸಹಿತ ಲಿಂಗ ಸಂಬಂಧವ ಮಾಡೆಂದು ಬಿನ್ನೈಸಲು ಆ ಪರಶಿವನು ನಾಲ್ವರು ಆಚಾರ್ಯರು ನಿರ್ಮಿಸಿದ ಅದೆಂತೆಂದೊಡೆ: ಸದಾಶಿವ ಈಶ್ವರ ಮಹೇಶ್ವರ ರುದ್ರ ಇಂತೀ ನಾಲ್ವರು ಶಿವನಿಂದ ದೀಕ್ಷೆಯಂ ಪಡೆದು ಶಿವಲಿಂಗವ ಧರಿಸಿಕೊಂಡಿಪ್ಪ ಕಾರಣ, ಅವರಿಂದ ಬ್ರಹ್ಮ ವಿಷ್ಣು ಇಂದ್ರ ಮುನಿಶ್ರೇಣಿ ಸಹಿತ ಲೋಕಾಲೋಕಂಗಳು ಕೃತಯುಗದಲ್ಲಿ ಉಪದೇಶವಾದರು. ಆ ಗಣೇಶ್ವರರ ಸಾಂಪ್ರದಾಯದವರು ನಾಲ್ವರು ಆಚಾರ್ಯರು ಉದಯವಾದರು, ಅದೆಂತೆಂದೊಡೆ: ವರಹಕರ್ಣ ಗಜಕರ್ಣ ಶಂಖುಕರ್ಣ ಘಂಟಾಕರ್ಣ ಇಂತೀ ನಾಲ್ವರು ಲೋಕಂಗಳಿಗೆ ಉಪದೇಶವ ಮಾಡಿದರು. ತ್ರೇತಾಯುಗದಲ್ಲಿ ಆ ಗಣೇಶ್ವರರ ಸಾಂಪ್ರದಾದವರು ನಾಲ್ವರು ಆಚಾರ್ಯರು ಉದಯವಾದರು. ಹೀಂಗೆ ಉದ್ಧರಿಸಿ ಆ ಗಣೇಶ್ವರರ ಸಾಂಪ್ರದಾಯದವರು ನಾಲ್ವರು ಆಚಾರ್ಯರು ಉದಯವಾದರು. ರೇಣುಕ ದಾರುಕ ಶಂಖುಕರ್ಣ ಗೋಕರ್ಣ ಇಂತೀ ನಾಲ್ವರು ಆಚಾರ್ಯರು ಲೋಕಂಗಳಿಗೆ ಉಪದೇಶವ ಮಾಡಿದರು. ದ್ವಾಪರಯುಗದಲ್ಲಿ ಆ ಗುಣಂಗಳ ಸಾಂಪ್ರದಾಯದವರು ನಾಲ್ವರು ಆಚಾರ್ಯರು ಉದಯಿಸಿದರು. ಅದೆಂತೆಂದೊಡೆ: ರೇವಣಸಿದ್ಧೇಶ್ವವರ ಮರುಳಸಿದ್ಧೇಶ್ವರ ಪಂಡಿತಾರಾಧ್ಯರು ಏಕೋರಾಮಿತಂದೆಗಳು ಇಂತೀ ನಾಲ್ವರು ಉಪದೇಶವ ಮಾಡಿದರು ಬಹುಜನಂಗಳಿಗೆ. ಕಲಿಯುಗದಲ್ಲಿ ಆಚಾರ್ಯರು ದಿಗ್ವಳಯ ಹೇಂಗೆಂದೊಡೆ ಮಧ್ಯದಲ್ಲಿ ಹೇಮದ ಗುರುಕಳಸ: ಆ ಕಳಸಕ್ಕೆ ಆಕಾಶಗಂಗೆಯ ತುಂಬೂದು; ಅದಕ್ಕೆ ಪತ್ರೆ ಬೀಜವಿಲ್ಲದ ವೃಕ್ಷ, ಅದರ ಶಾಖೆಗಳು ನಾಲ್ಕು ಕಳಸ. ಅದೆಂತೆಂದೊಡೆ: ಈಶಾನ್ಯದಿಕ್ಕಿನ ಮಾಣಿಕ್ಯದ ಕಳಸಕ್ಕೆ ಪಾತಾಳ ಗಂಗೆಯ ತುಂಬೂದು. ಅದಕ್ಕೆ ಪತ್ರೆ ಕಲ್ಪವೃಕ್ಷ; ಅದಕ್ಕೆ ಕಳಸದಾಚಾರ್ಯರು ರೇವಣಸಿದ್ಧೇಶ್ವರದೇವರು. ಅವರಾಶ್ರಯ ನಕ್ಷತ್ರಪರ್ವತ. ಅವರಿಗೆ ವಾಹನ ಆಭರಣಗಳೆಂತೆಂದೊಡೆ: ಸಿಂಹ ವಾಹನ, ಅಂಬರ ಕುಪ್ಪಸವೇ ಕಂಥೆ, ಕರಿಯ ಕಂಬಳಿಯ ಕಿರೀಟ, ಕೃಷ್ಣಕಂಬಳಿಯ ಗದ್ದುಗೆ ಪಂಚಲೋಹದ ಕಾಮಾಕ್ಷಿ, ಮುರಿಸೂಜಿ ದಂಡ ಕಮಂಡಲ ಕರ್ಪರ ಇಂತಿವೆಲ್ಲ ಪಂಚಲೋಹದ ಸ್ವರೂಪವವಿಡಿದು ಭಿಕ್ಷಾಂದೇಹಿಯೆಂಬ ಶಬ್ದ. ಇದು ರೇವಣಸಿದ್ಧೇಶ್ವರನ ಸ್ಥಲ ನೋಡಾ. ಆಗ್ನೇಯ ದಿಕ್ಕಿನ ಕಳಸಕ್ಕೆ ಚರಗಂಗೆಯ ತುಂಬೂದು; ಅದಕ್ಕೆ ಪತ್ರೆ ಮಂದಾರ ವೃಕ್ಷ: [ಅದಕ್ಕೆ] ಕಳಸದಾಚಾರ್ಯರು ಮರುಳಸಿದ್ಧೇಶ್ವರದೇವರು. ಅವರಾಶ್ರಯ ಕುಮಾರಪರ್ವತ. ಅವರಿಗೆ ಸಲುವ ವಾಹನ ಮುದ್ರೆಗಳಾವವೆಂದೊಡೆ: ವ್ಯಾಘ್ರ ವಾಹನ, ಅವರ ಗದ್ದುಗೆ ಅಂಬರದ ಜಜ್ಜುಗಂಥೆ, ಲೋಹದ ಕಾಮಾಕ್ಷಿ, ಮುರಿಸೂಜಿ ದಂಡ ಕಮಂಡಲ ಕರ್ಪರವೆಲ್ಲ ಕಬ್ಬುನವೆಯಹುದು. ಆದಿಚರಮೂರ್ತಿಯಾಗಿ ಭಿಕ್ಷಾಂದೇಹಿಯೆಂಬ ಶಬ್ದ. ಇದು ಮರುಳಸಿದ್ಧೇಶ್ವರನ ಸ್ಥಲ ನೋಡಾ. ನೈಋತ್ಯದಲ್ಲಿ ತಾಮ್ರದ ಕಳಸ, ಪವಳದ ಬೆಳಗು; ಆ ಕಳಸಕ್ಕೆ ಸರಸ್ವತಿಯ ಗಂಗೆಯ ತುಂಬೂದು. ಅದಕ್ಕೆ ಪತ್ರೆ ಚೂತವೃಕ್ಷ. ಆ ಕಳಸಕ್ಕೆ ಆಚಾರ್ಯರು ಪಂಡಿತಾರಾಧ್ಯರು. ಅವರಾಶ್ರಯ ರತ್ನಗಿರಿ, ಅವರಿಗೆ ವಾಹನ ಮುದ್ರೆಗಳೆಂತೆಂದೊಡೆ: ನಂದಿಯ ವಾಹನ, ಚೌಕುಳಿಯ ದಾರವೆತ್ತಿದ ಕಾವಿಯ ಖಟ್ಟಾಂಗದ ಗದ್ದುಗೆ, ದಾರವೆತ್ತಿದ ಕಂಥೆ, ಕರ್ಣಕುಂಡಲ ಮುರಿಸೂಜಿ ದಂಡ ಕಮಂಡಲ ಕರ್ಪರವೆಲ್ಲ ತಾಮ್ರವೆಯಹುದು ಮಸ್ತಕಕ್ಕೆ ಮುರಿಗೆಯ ಬಟ್ಟಪಾವುಡ, ಅರಿವು ಮೊದಲಾದುವ ಪಿಡಿದು ಭಿಕ್ಷಾಂದೇಹಿಯೆಂಬ ಶಬ್ದ. ಇದು ಪಂಡಿತಾರಾಧ್ಯರ ಸ್ಥಲ ನೋಡಾ. ವಾಯವ್ಯ ದಿಕ್ಕಿನಲ್ಲಿ ಬೆಳ್ಳಿಯ ಕಳಸ, ಅದು ಮೌಕ್ತಿಕದ ಬೆಳಗು. ಆ ಕಳಸಕ್ಕೆ ಧವಳಗಂಗೆಯ ತುಂಬೂದು; ಅದಕ್ಕೆ ಪತ್ರೆ ವಟವೃಕ್ಷ, ಆ ಕಳಸಕ್ಕೆ ಏಕೋರಾಮಿತಂದೆಗಳೆ ಆಚಾರ್ಯರು. ಅವರಾಶ್ರಯ ರಜತಾದ್ರಿ ಪರ್ವತ; ಅವರಿಗೆ ವಾಹನ ಮುದ್ರೆಗಳಾವವೆಂದೊಡೆ; ರತ್ನಗಂಬಳಿಯ ಗದ್ದುಗೆ, ಆನೆಯ ವಾಹನ, ತುರಗ ದಂಡಿಗೆ ಪಲ್ಲಕ್ಕಿ, ಶ್ವೇತಾಂಬರ, ಶಿಖಿಯಲ್ಲಿ ಪಟ್ಟುಕಿರೀಟ, ಕರ್ಣಕುಂಡಲ, ಮುರಿಸೂಜಿ ಕಮಂಡಲ ದಂಡ ಕರ್ಪರ ಇಂತಿವೆಲ್ಲ ಬೆಳ್ಳಿಯವೆ ಅಹುದು. ಆಧಾರವಿಡಿದು ಭಿಕ್ಷಾಂದೇಹಿಯೆಂಬ ಶಬ್ದ. ಇದು ಏಕೋರಾಮಿತಂದೆಗಳ ಸ್ಥಲ ನೋಡಾ. ಆ ನಾಲ್ಕಚಾರ್ಯರಿಗೆ ವೇದಾಗಳಾವುವೆಂದಡೆ; ರೇವಣಸಿದ್ಧೇಶ್ವರದೇವರಿಗೆ ಸಾಮಾವೇದ ಮರುಳಸಿದ್ಧೇಶ್ವರರಿಗೆ ಅಥರ್ವಣ ವೇದ ಪಂಡಿತಾರಾಧ್ಯರಿಗೆ ಯಜುರ್ವೇದ ಏಕೋರಾಮಿತಂದೆಗಳಿಗೆ ಋಗ್ವೇದ ಇಂತೀ ವೇದಸಂಭವರಾದ ನಾಲ್ಕಾಚಾರ್ಯರೆ ಮಠಸ್ಥಲವಂತರೆಂದರಿದು ಅವರಿಗೆ ನಮೋ ನಮೋ ಎಂಬೆ ಅದೆಂತೆಂದೊಡೆ: ಆ ಮಹಾತ್ಮರು ಆದಿವಿಡಿದು ಮಠಸ್ಥಲವಂತರೆನಿಸಿಕೊಂಬರೆ, ಅನಾದಿಮಲ ಸಂಸಾರವಿಡಿದು, ಬಾಹ್ಯದ ವ್ಯಾಪರ ನಷ್ಟವಾಗಿ, ಅಂತರಂಗದ ಚಿಲ್ಲಿಂಗದಲ್ಲಿ ಮನೋದೃಷ್ಠಿ ತಲ್ಲೀಯವಾಗಿರಬಲ್ಲರೆ ಮಠಸ್ಥಲವೆಂಬೆನಯ್ಯ. ಹಾಂಗಲ್ಲದೆ, ತಿಲರಸದಲ್ಲಿ ಬಿದ್ಧ ಮಕ್ಷಿಕದಂತೆ, ಸಂಸಾರಪಾಶದಲ್ಲಿ ಬಿದ್ಧು ಹೊರಳುತ್ತ ಸಾವುತ್ತ ಹುಟ್ಟುತ್ತಿರ್ದು ಮತ್ತೆ ಗುರುಸಾಂಪ್ರದಾಯಕ್ಕೆ ಹೋರುವ ಅಜ್ಞಾನಿಗಳಿಗೆ ಕುಂಭಿಯ ಪಾತಕ ನರಕ ತಪ್ಪದೆ ಕಾಣಾ ಶೂನ್ಯನಾಥಯ್ಯ.