Index   ವಚನ - 11    Search  
 
ಶ್ರೀಗುರು ಲಿಂಗ ಜಂಗಮ ಪ್ರಸಾದ ಪಾದೋದಕ ವಿಭೂತಿ ರುದ್ರಾಕ್ಷಿ ಷಡಕ್ಷರವೆಂಬ ಅಷ್ಟಾವರಣಂಗಳು ಪರಶಿವ ತಾನೆಯಾದ ಕಾರಣ ತ್ರಿವಿಧ ತ್ರಿವಿಧ ದರ್ಶನ ಸಂಬಂಧವೆಂತೆಂದೊಡೆ: ಶ್ರೀಗುರುವಿನ ಪಾದವೆ ಲಿಂಗ, ತನ್ಮೂರ್ತಿಯೆ ಆಚಾರ್ಯನು ತತ್ಸಂಬಂಧದ ಸುಜ್ಞಾನವೆ ಚರಮೂರ್ತಿ ನೋಡಾ. ಶಿವಲಿಂಗಪೀಠವೆ ಗುರು, ಗೋಮುಖವೆ ಚರ ಗೋಳಕವೆ ಶಿವಲಿಂಗವಯ್ಯ. ಚರಲಿಂಗಪಾದವೆ ಲಿಂಗ, ಆ ಮೂರ್ತಿಯೆ ಚರ ಆ ಸಂಬಂಧದ ಸುವಿವೇಕವೆ ಶ್ರೀಗುರು ನೋಡಾ ಪ್ರಸಾದ ಸ್ವಯವೆ ಲಿಂಗ, ರುಚಿಯೆ ಚರ ಪರಿಣಾಮವೆ ಗುರುವಯ್ಯ. ಪಾದೋದಕವೆ ಗುರು, ಆ ಚಿದ್ರಸವೆ ಲಿಂಗ ಸೇವನಾಮುಖದಾನಂದವೆ ಆ ಚರಮೂರ್ತಿಯಯ್ಯ. ಭಸ್ಮದ ಸ್ವಯವೆ ಲಿಂಗ, ಅಲ್ಲಿಯ ಮಂತ್ರವೆ ಚರ ದ್ವಂದ್ವಗ್ರಸ್ತ ಚೈತನ್ಯವೆ ಗುರುವಯ್ಯ. ರುದ್ರಾಕ್ಷಿಯ ಮೂಲವೆ ಗುರು, ಆ ನಾಳವೆ ಲಿಂಗ ಅದರ ಮುಖವೆ ಜಂಗಮವಯ್ಯ. ಮನವರ್ಣವೆ ಲಿಂಗ, ಶಿವಾಕ್ಷರವೆ ಚರ ಮಕಾರವೆ ಗುರುವಯ್ಯ. ಇನ್ನಾ ಪೂರ್ವಸಂಬಂಧವನೆ ಆ ಅಕ್ಷರದಲ್ಲಿ ಅರಿವ ಭೇದ ಹೇಗೆಂದೊಡೆ: ಗುಕಾರವೆ ಚರ, ರುಕಾರವು ಲಿಂಗ ದ್ವಂದ್ವವಾದ ಜ್ಞಾನವೆ ಗುರುವಯ್ಯ. ಲಿಕಾರವೆ ಗುರು, ಬಿಂದುವೆ ಲಿಂಗ, ಗಕಾರವೆ ಚರಲಿಂಗವಯ್ಯ. ಜಕಾರವೆ ಗುರು, ಗಕಾರವೆ ಲಿಂಗ, ಮಕಾರವೆ ಚರಲಿಂಗವಯ್ಯ. ಪ್ರಕಾರವೆ ಚರ, ಸಾಕಾರವೆ ಲಿಂಗ, ದಕಾರವೆ ಗುರುವಯ್ಯ. ಪಕಾರ ದಕಾರವೆ ಗುರು, ಉಕಾರ ದಕಾರವೆ ಲಿಂಗ ಉಭಯ ಸಂಬಂಧವೆ ಚರಲಿಂಗವಯ್ಯ. ವಿ ಎಂಬ ಅಕ್ಷರವೆ ಲಿಂಗ, ಭೂ ಎಂಬ ಅಕ್ಷರವೆ ಚರ, ತಿ ಎಂಬ ಅಕ್ಷರವೆ ಗುರುವಯ್ಯ. ರುಕಾರವೆ ಚರ, ದ್ರಾಕರವೆ ಗುರು, ಕ್ಷಕಾರವೆ ಲಿಂಗವಯ್ಯ. ಮಕಾರವೆ ಲಿಂಗ, ಬಿಂದುವೆ ಚರ, ತ್ರಯೆಂಬ ಅಕ್ಷರವೆ ಗುರುವಯ್ಯ. ಅದೆಂತೆಂದೊಡೆ: ಶಕ್ತಿರೂಪಾದ ಕಾರಣ ಗುರು ಶಬ್ದಕ್ಕೆ ನಿರ್ವಚನವಾಯಿತ್ತು. ಲಯ ಸ್ಥಿತಿ ಸೃಷ್ಠಿಗೆ ಕಾರಣವಾದುದಾಗಿ ಲಿಂಗವೆಂಬುದಕ್ಕೆ ವಿರ್ವಚನವಾಯಿತ್ತು. ತ್ರೈಮೂರ್ತಿ ಸ್ವರೂಪವಾದ ಕಾರಣ ಚರಲಿಂಗವೆಂಬುದಕ್ಕೆ ವಿರ್ವಚನ, ಸುಜ್ಞಾನ ದೋಷನಾಶ ಜನ್ಮದಹನ ಕರ್ಮಛೇದನದಿಂದ ಉದಕ ಶಬ್ದಕ್ಕೆ ನಿರ್ವಚನ. ಪ್ರಸಾದ ಭುಕ್ತಿ ಮುಕ್ತಿ ಸ್ವರೂಪವಾದ ಕಾರಣ ಶೇಷವೆಂಬುದಕ್ಕೆ ನಿರ್ವಚನ. ಶಕ್ತಿರೂಪು ತೇಜರೂಪು ಶಿವರೂಪಿಂದ ವಿಭೂತಿಯೆಂಬುದಕ್ಕೆ ನಿರ್ವಚನ. ಬಿಂದು ಕಳೆ ನಾದ ಶಿವನೆಂಬ ಚತುರ್ವಿಧದಿಂದ ರುದ್ತಾಕ್ಷಿಯೆಂಬುದಕ್ಕೆ ನಿರ್ವಚನ. ಚಿತ್ಕಳೆ ಮೂಲಪ್ರಕಾಶ ಸುನಾದ ಸುಜ್ಞಾನದಿಂದ ಮಂತ್ರವೆಂಬುದಕ್ಕೆ ನಿರ್ವಚನವಯ್ಯ. ಇಂತಿವನರಿದ ಶರಣಂಗೆ ಆ ಗುರುವು ಇಷ್ಟಬ್ರಹ್ಮ, ಲಿಂಗವೆ ಪ್ರಾಣಲಿಂಗ, ಜಂಗಮವೆ ಭಾವಲಿಂಗ, ಪ್ರಸಾದವೆ ಚಿತ್ಕಾಯ, ಪಾದೋದಕ ಶರಣ ತಾನೆ ನೋಡಾ. ವಿಭೂತಿಯೆ ಅಂತರಂಗದ ಚಿತ್ಪ್ರಕಾಶ, ಚತುರ್ದಶ ಇಂದ್ರಿಯಂಗಳೆ ರುದ್ರಾಕ್ಷಿ ಷಟ್ ಷಟ್ ಕರಣಂಗಳಲ್ಲಿ ಮಂತ್ರ ನ್ಯಸ್ತವಾದುದೆ ಶಿವಮಂತ್ರವಯ್ಯ. ಇಂತೀ ಎರಡು ತೆರದ ಅಷ್ಟಾವರಣವು ಆ ಶರಣನಲ್ಲಿ ಅಂಗೀಕರಿಸಿದ ಕಾರಣ ಆ ಶರಣನು ಭಕ್ತನೆನಿಸಿಕೊಂಬ, ಅದೆಂತೆಂದೊಡೆ: ಶ್ರದ್ಧೆಯಿಂದ ಭಕಾರವಾಯಿತ್ತು, ನಿರ್ವಂಚಕತ್ವದಿಂದ ಕಕಾರವಾಯಿತ್ತು, ದೃಢದಿಂದ ತಿ ಎಂಬ ಅಕ್ಷರವಾಯಿತ್ತು. ಇಂತೀ ಅರಿವು ಉಳ್ಳವನಾದ ಕಾರಣ ಜ್ಞಾನಿಯೆನಿಸಿಕೊಂಡ. ಅದು ಹೇಗೆಂದೊಡೆ: ಶಿವತತ್ವವರ್ಧನವ ಮಾಡುವ ಕಾರಣದಿಂದ ಜಕಾರವಾಯಿತ್ತು. ಸಂಸಾರ ಪ್ರಪಂಚ ಲೋಪವ ಮಾಡುವುದರಿಂದ ನಕಾರವಾಯಿತ್ತು. ಇಂತಿವನರಿದ ಶರಣನು ಅನಾದಿ ಭಕ್ತನೆನಿಸಿಕೊಂಡ. ಅದೆಂತೆಂದೊಡೆ: ಆ ಭಕ್ತನ ಮನವೆ ಲಿಂಗ, ಆತನ ಜ್ಞಾನವೆ ಜಂಗಮ, ಆ ಜ್ಞಾನದ ಪೂರ್ವವೆ ಗುರು, ಆ ಭಕ್ತನೆ ಶೇಷ, ತನ್ನ(ತತ್?) ಜ್ಞಾನದ ಶ್ರೇಷ್ಠವೆ ಪಾದೋದಕ, ಆ ಜ್ಞಾನದಲ್ಲಿಯ ಪ್ರಕಾಶವೆ ವಿಭೂತಿ ಆಯಾ ಕರಣಂಗಳಲ್ಲಿ ಕರೆವ ವಿವೇಕದ ದೃಷ್ಟಿಯೆ ರುದ್ರಾಕ್ಷೆ. ಆ ಭಕ್ತನ ನಾಮವೆ ಮಂತ್ರವಯ್ಯ. ಇಂತೀ ಮೂರು ತೆರನ ಅಷ್ಟಾವರಣವನುಳ್ಳ ಅನಾದಿ ಭಕ್ತನ ಶ್ರೀಚರಣವ ತೋರಿ ಬದುಕಿಸಾ ಎನ್ನ ಶೂನ್ಯನಾಥಯ್ಯ.