Index   ವಚನ - 18    Search  
 
ಗೃಹಾದಿ ಸರ್ವಾರಂಭಮಂ ಬಿಟ್ಟ ಶರಣಂಗೆ ನಿರಾಲಂಬವಾದ ಕುಟುಂಬಂಗಳು ಹೇಂಗೆಂದಡೆ: ವಿದ್ಯವೆ ಸತಿ, ಸಂತೋಷವೆ ಸುತನು ಶ್ರದ್ಧೆಯೆ ನಾಸ್ತಿ (ಆಸ್ತಿ?), ವೈರಾಗ್ಯವೆ ಬಂಧು ಕ್ಷಮೆಯೆ ಪರಿಚಾರಕನು, ಶಾಂತಿಯೆ ಸಖನು ಭಕ್ತಿಯೆ ಮಾತೆ, ಆಚಾರವೆ ತಂದೆ ಸತ್ಯವೆ ಮೊಮ್ಮಗನು, ಮೈತ್ರಿ ಕರಣ, ಮುದಿತ ಶಾಂತಿಯೆಂಬಿವು ಮರಿಮಕ್ಕಳು. ಜ್ಞಾನವೆ ದೇಹ, ವಿಚಾರವೆ ಕ್ಷೇತ್ರ, ಅಹಿಂಸೆಯೆ ದಾಸಿ, ಅಸ್ತಮಯವೆ ದಾಸ, ಧರ್ಮವೆ ವಾಹನ, ದಮೆಯೆ ಆಚಾರ್ಯನು ಮುಕ್ತಿಯೇ ದೇಶವೆಂಬೀ ಪರಮಾರ್ಥವಾದ ಸಂಸಾರವನುಳ್ಳ ಶರಣಂಗೆ ಸಮತೆಯೆ ಕಂಥೆ, ಜ್ಞಾನವೆ ದಂಡ, ದಯೆಯೆ ಕಮಂಡಲ ವೈರಾಗ್ಯವೆ ಭಿಕ್ಷಾಪಾತ್ರೆ, ಕ್ಷಮೆಯೆ ಭಸ್ಮಘುಟಿಕೆಯೆಂಬ ಪಂಚಮುದ್ರೆಯನರಿದು ಶಿವಾಲಾಂಛನವಾದ ಆವ ವೇಷಾವನಾದರು ಧರಿಸಿ ಭಿಕ್ಷಾಹಾರವನೆ ಕೊಂಡುಭಸ್ಮೋದ್ಧೊಳನೆ ಶಿವಲಿಂಗಾರ್ಚನೆ ಶಿವಮಂತ್ರಜಪವ ಶಿವಧ್ಯಾನ ಸ್ಥಳಕುಳ ವಿಚಾರ ಲಿಂಗಾಂಗಸಂಯೋಗಾದಿ ಸುಜ್ಞಾನ ಕ್ರಿಯಾಸಂಪನ್ನನಾಗಿ ರಸರಸಾಯನವಾದ ವೈದ್ಯ ಜ್ಯೋತಿಷ್ಯ ಕ್ರಯ ವಿಕ್ರಯಾದಿ ಲೋಕವ್ಯವಹಾರಮಂ ಬಿಟ್ಟು ವನಿತೆಯರ ವಿಷಯಂಗಳ ಬಿಟ್ಟು ವಿರಕ್ತನಾಗಿ ಆ ಭವಾರಣ್ಯ ಮಧ್ಯಮ ಲೋಭವೆಂಬ ಪಂಕಮಂ ಪುಗದೆ ಇಂದ್ರಿಯಂಗಳೆಂಬ ಪಿಪುಗಳ ಲೆಕ್ಕಿಸಿದೆ, ಮೋಹವೆಂಬ ಪಿಶಾಚಿ[ಯ] ಭಯವಿಲ್ಲದೆ ಕ್ರೋಧವೆಂಬ ವ್ಯಾಘ್ರಂಗೆ ಸಿಕ್ಕದೆ, ಮಮತೆಯೆಂಬ ಸರ್ಪಭೀತಿಯಿಲ್ಲದೆ ಮನ್ಮಥನೆಂಬ ಚೋರಂಗೆ ಒಳಗಾಗದೆ, ಮದವೆಂನಂಧಕಾರದಲ್ಲಿ ಕಣ್ಣುಗೆಡದೆ ತಾಪತ್ರಯವೆಂಬ ಗುಳಿಯೊಳು ಬೀಳದೆ, ವಿಷಯವೆಂಬ ಕಂಟಕಂಗಳ ಮೆಟ್ಟದೆ ಅಸುವೆಂಬ ವಿಷಲತೆಯೊಳ ತೊಡಕದೆ, ಅಹಂಕಾರವೆಂಬ ಮಡುವಿನೊಳು ಬೀಳದೆ ಸರ್ವಾವಧಾನಿಯಾಗಿ ನಿಜಜಂಗಮಸ್ಥಲವನೆಯ್ದಿ ಷಡುಸ್ಥಲಜ್ಞಾನಿಯಾದ ವೀರಶೈವಸಂಪನ್ನ ಶರಣನೆ ಸರ್ವರಿಗೆಯು ಅಧಿಕ ನೋಡಾ. ಅದೆಂತೆಂದೊಡೆ: ಕ್ರಿಮಿಕೀಟಕ ಪಥಂಗಳಿಂದ ಪಶುಗಳಧಿಕ ಆ ಪಶುಗಳಿಂದ ನರನಧಿಕ ಆ ನರರುಗಳಿಂದ ದ್ವಿಜರಧಿಕ ಆ ದ್ವಿಜರಿಂದ ವಿಪ್ರರಧಿಕ ಆ ವಿಪ್ರದರಿಂದ ಯಜ್ಞಾಕರ್ಮರಧಿಕ ಆ ಯಜ್ಞಕರ್ಮರಿಂದ ಯಜ್ಞಕರ್ತೃಗಳಧಿಕ ಆ ಯಜ್ಞಕರ್ತೃಗಳಿಂದ ಸನ್ಯಾಸಿಗಳಧಿಕ ಆ ಸನ್ಯಾಸಿಗಳಿಂದ ಶಾಸ್ತ್ರಬಲ್ಲವರಧಿಕ ಆ ಶಾಸ್ತ್ರಿಗಳಿಂದ ಶಿವಪೂಜಕರಧಿಕ ಆ ಶಿವಪೂಜಕರಿಂದ ಆಂಗದ ಮೇಲೆ ಲಿಂಗವ ಧರಿಸಿದವರೆ ಅಧಿಕ ಆ ಲಿಂಗಾಧಾರಕರಿಂದ ಷಡುಸ್ಥಲ ಜ್ಞಾನಿಗಳೆ ಅಧಿಕ. ಅದೆಂತೆಂದೊಡೆ: “ಯಜ್ಞೋಪವೀತ ಸಹಸ್ರಭ್ಯೋ ಬ್ರಹ್ಮಚಾರಿ ವಿಶಿಷ್ಯತೇ ಬ್ರಹ್ಮಚಾರಿ ಸಹಸ್ರಭ್ಯೋ ವೇದಾಧ್ಯಾಯ ವಿಶಿಷ್ಯತೇ ವೇದಾಧ್ಯಾಯ ಸಹಸ್ರಭ್ಯೋಶ್ಚಾಗ್ನಿಹೋತೃ ವಿಶಿಷ್ಯತೇ ಶ್ಚಾಗ್ನಿಹೋತ್ರೇ ಸಹಸ್ರಭ್ಯೋ ಯಜ್ಞಯಾಜಿ ವಿಶಿಷ್ಯತೇ ಯಜ್ಞಯಾಜಿ ಸಹಸ್ರಭ್ಯೋ ಶತ್ರಯಾಜಿ ವಿಶಿಷ್ಯತೇ ಶತ್ರಯಾಜಿ ಸಹಸ್ರಭ್ಯೋ ಸರ್ವವಿದ್ಯಾರ್ಥಪಾರಗಂ ಸರ್ವವಿದ್ಯಾರ್ಥವಿತ್ಕೋಟ್ಯ ಶಿವಭಕ್ತಿ ವಿಶಿಷ್ಯತೇ ನಿಕೃಷ್ಟಾಚಾರ ಜನ್ಮಾನೋ ವಿರುದ್ಧೋ ಲೋಕವರ್ತಿಸ್ತು ಕೋಟಿಭ್ಯ ವೇದ ವಿದೂಷಾಂ ಶ್ರೇಷ್ಠೋದುದ್ಭವ ಭಾವಿತಂ” ಎಂದುದಾಗಿ ಆ ಷಡುಸ್ಥಲಸಂಪನ್ನ ಶರಣನು ಸರ್ವರಿಗೆಯು ಶ್ರೇಷ್ಠವಾದ ಕಾರಣ ಸ್ಕಾಂಧೇ- “ಕ್ರಿಮಕೀಟಕ ಪಥಂ ಗೇಭ್ಯೇ ಪಶುವಃ ಪ್ರಾಜ್ಞಯಾಧಿಕಂ ಪಶುಭ್ಯೇಪಿ ನರಃ ಶ್ರೇಷ್ಠಂ ತೇಷು ಶ್ರೇಷ್ಠ ದ್ವಿಜಾತಯಃ ದ್ವಿಜಾತಿಷ್ಠಾ ಕೋ ವಿಪ್ರ ವಪ್ರೇಷು ಕೃತಬುದ್ಧಿಮಾನ್ ಕೃತಬುದ್ಧೇಷು ಕರ್ತಾರಂ ಲೇಭ್ಯಂ ಸನ್ಯಾಸಿನೋಧಿಕಾ ಸ್ತೇಭ್ಯಂ ವಿಜ್ಞಾನಿನಾ ಶ್ರೇಷ್ಠತೇಷು ಸಂಕರಪೂಜಕ ತೇಷು ಶ್ರೇಷ್ಠ ಮಹಾಭಾಗಂ ಮಮ ಲಿಂಗಾಂಗಿ ಸಂಗಿನಃ ಲಿಂಗಾಂಗ ಸಂಗಿಷ್ಯಧಿಕೋ ಷಟ್ಸ್ಥಲಜ್ಞಾನ ವಾನ್ಛವೇತ್ ತಸ್ಮಾದಪ್ಯಧಿಕೋನಾಸ್ತಿ ತ್ರಿಲೋಕೇಷು ಸರ್ವದಾಃ” ಇಂತೆಂದುದಾಗಿ, ಇಂತಪ್ಪ ಷಟ್ಸ್ಥಲ ಸಂಪನ್ನ ಶರಣನಿಂದ ಮೂರುಲೋಕ ಮೊದಲಾದ ಸರ್ವಲೋಕದಲ್ಲಿಯು ಶ್ರೇಷ್ಠರಿಲ್ಲ ನೋಡಾ. ಆ ದಿವ್ಯಜ್ಞಾನಿಯಪ್ಪ ಶರಣನು ಆವ ದೇಶದಲ್ಲಿಯು ಆವ ಕಾಲದಲ್ಲಿಯು ನಿಜಮುಕ್ತನಾದ ಕಾರಣ ಆತಂಗೆ ನಮೋ ನಮೋ ಎಂದು ಬದುಕಿದೆನು ಕಾಣಾ ಶೂನ್ಯನಾಥಯ್ಯ.