Index   ವಚನ - 9    Search  
 
ಆದಿ-ಅನಾದಿ, ಸಾಕಾರ-ನಿರಾಕಾರ ಎಂಬುವೇನುವಿಲ್ಲದ ವಾಗತೀತವಾದ ನಿರ್ನಾಮವಸ್ತು ತಾನೆ! ತನ್ನ ಲೀಲಾವಿಲಾಸದಿಂದಾದ ಪ್ರಭಾವದ ಸ್ಫುರಣವೆ ಮಹಾಪ್ರಕಾಶ. ಆ ಮಹಾಪ್ರಕಾಶದ ಆವರಣವೆ ನಿಜಾತ್ಮನು. ಆ ನಿಜಾತ್ಮನೆ ತನ್ನಿಂದಾದ ಸಮಸ್ತವಸ್ತುಗಳೆನಿಪ ತತ್ತ್ವಂಗಳಿಗೆ ತಾನೇ ಕಾರಣವಾದ. ಇದನರಿಯದೆ ಆತ್ಮಂಗೆ ಅನಾದಿಮಲತನುತ್ವ ಪಾಶಬಂಧ ಉಂಟೆಂಬರು, ಅದು ಹುಸಿ. ಆ ಆತ್ಮನು ತನ್ನಿಂದ ಪ್ರವರ್ತಿಸುವ ಮಹದಾದಿ ತತ್ತ್ವಂಗಳಿಗೆ ತಾನೇ ಮೂಲಾಧಾರವಾದ ಕಾರಣ ಮೂಲಪ್ರಕೃತಿಸ್ವರೂಪವೆನಿಸಿಕೊಂಬನು. ಆ ನಿಜಾತ್ಮನಲ್ಲಿ ಅನಾದಿಮಲಪಾಶಂಗಳು ಸತ್ಯವಲ್ಲ. ಇದು ಕಾರಣ, ಆ ಆತ್ಮನು ಮೇಲಣ ಘನಲಿಂಗವಾದುದು ತಾನೆ, ಲಯಿಸುವುದಕ್ಕೂ ಗಮಿಸುವುದಕ್ಕೂ ತಾನೆ. ತಾನಾ ಕಾರಣನಾದನಾಗಿ ಪ್ರತಿಪದಾರ್ಥವಿಲ್ಲ. ಅದೆಂತೆಂದಡೆ: ಪರಾತ್ಪರತರವಪ್ಪ ಪರಬ್ರಹ್ಮಕ್ಕೆ ಬೆಚ್ಚಿ ಬೇರಾಗದ ಕಾರಣ. ಅದು ದೀಪ ದೀಪದ ಪ್ರಭೆಯಂತೆ, ರತ್ನ ರತ್ನದ ಕಾಂತಿಯಂತೆ ಆತ್ಮಲಿಂಗೈಕ್ಯ. ಇಂತೀ ಸಹಜಸೃಷ್ಟಿಯನರಿಯದೆ ``ಅನಾದಿ ಆತ್ಮಂಗೆ ಪಾಶಂಗಳುಂಟು, ಆತ್ಮ ಪಶು ಪಾಶ ಮಾಯೆ ಪತಿ ಶಿವ`` ಎಂಬರು! ಇಂತೀ ತೆರದಲ್ಲಿ ತ್ರಿಪಾದರ್ಥಗಳ ಹೇಳುವರು! ಅದು ಹುಸಿ. ಸೃಷ್ಟಿ ಮೊದಲು ಐಕ್ಯ ಕಡೆಯಾಗಿ ಅಭೇದವಲ್ಲದೆ ಭೇದವಿಲ್ಲ. ಇನ್ನು ಅದ್ವೈತಮತದಲ್ಲಿ ವೇದಾಂತಿಯೆಂಬಾತ ನಿಜ ಸೃಷ್ಟಿಯರಿಯ. ಅದೆಂತೆಂದಡೆ: `ಶಕ್ತ್ಯಧೀನಂ ಪ್ರಪಂಚಶ್ಚ' ಎಂಬ ಶ್ರುತಿಯನರಿದು! ಆ ಶಕ್ತಿಯ ಆಧಾರದಲ್ಲಿ ತೋರುವ ತತ್ತ್ವಂಗಳ ಪ್ರವರ್ತನೆ ವಿಶ್ವವೆನಿಸುವದು. ಅದನರಿಯದೆ ವೇದಾಂತಿ ದಗ್ದೃಶ್ಯವೆಂಬ, ದೃಕ್ಕೆ ವಸ್ತುವೆನಿಪಾತ್ಮನೆಂಬ, ದೃಶ್ಯವೆ ಮಾಯೆಯೆಂಬ! ಅದು ಹುಸಿ; ಆ ಶಕ್ತಿಯ ಆಧಾರದಲ್ಲಿ ತೋರುವ ವಿಶ್ವಪ್ರಪಂಚವು. ಆ ಪ್ರಪಂಚದ ಮಧ್ಯದಲ್ಲಿ ತೋರುವ ಶಕ್ತಿಯ ಕ್ರಮವೆಂತೆಂದಡೆ: ಜಲಮಧ್ಯದಲ್ಲಿ ತೋರುವ ಇನಬಿಂಬದಂತೆ ಬಿಂಬಿಸುವುದಾಗಿ! ಆ ಬಿಂಬವೇ ಜೀವನು, ಆ ಜೀವನೆ ದೃಕ್ಕು, ಅವನ ಕೈಯಲ್ಲಿ ಕಾಣಿಸಿಕೊಂಬ ವಿಷಯವೆ ಮಾಯೆ. ಈ ಎರಡರ ವ್ಯವಹಾರ ಆ ಶಕ್ತಿಗೆ ಇಲ್ಲವಾಗಿ, ದೃಕ್ಕುದೃಶ್ಯವೆಂಬ ವೇದಾಂತಿಯ ಮತವಂತಿರಲಿ. ಇಂತೀ ದ್ವೈತಾದ್ವೈತದಲ್ಲಿ ಪ್ರವರ್ತಿಸರು ಶಿವಶರಣರು. ಈ ದ್ವೈತಾದ್ವೈತದಲ್ಲಿ ಪ್ರವರ್ತಿಸುವ ಪ್ರವರ್ತನಕ್ಕೆ ತಾವೆ ಕಾರಣವೆನಿಪ್ಪರು. ಇಂತೀ ಕಾರಣವೆನಿಸಿರ್ಪ ಶರಣರ ನಿಲವೆಂತುಂಟೆಂದಡೆ: ಸಕಲವಿಶ್ವವೆ ಸತಿಯರೆನಿಸಿ ತಾನು ತನ್ನ ನಿಜಕ್ಕೆ ಅಂಗನಾಗಿ, ಆ ನಿಜವೆ ಆತ್ಮಂಗೆ ಅಂಗವಾಗಿ ನಿಂದ ನಿಲವೆ ಪರವಸ್ತುವಿನ ಪ್ರಭಾವ. ಆ ಪ್ರಭಾವಾದ ಶರಣನ ನಿಲುವೆ ಉರಿಲಿಂಗದೇವನೆಂಬ ಗಂಡನಾಗಿ ಬಂಧ ತೆಗೆದ.