Index   ವಚನ - 30    Search  
 
ಅರಿಯದ ಕಾರಣ ಭವಕ್ಕೆ ಬಂದರು. ಅರಿವಿಲ್ಲದವಂಗೆ ಆಚಾರವಿಲ್ಲ, ಆಚಾರವಿಲ್ಲದವಂಗೆ ಅರಿವಿಲ್ಲ. ಅರಿವಿಲ್ಲದವಂಗೆ ಗುರುವಿಲ್ಲ, ಗುರುವಿಲ್ಲದವಂಗೆ ಲಿಂಗವಿಲ್ಲ. ಲಿಂಗವಿಲ್ಲದವಂಗೆ ಜಂಗಮವಿಲ್ಲ, ಜಂಗಮವಿಲ್ಲದವಂಗೆ ಪ್ರಸಾದವಿಲ್ಲ. ಪ್ರಸಾದವಿಲ್ಲದವಂಗೆ ಮಹಾಲಿಂಗವಿಲ್ಲವಯ್ಯಾ. ಈ ಆರು ಸಹಿತ ಆಚಾರ, ಆಚಾರಸಹಿತ ಗುರು ಗುರುಸಹಿತ ಲಿಂಗ, ಲಿಂಗಸಹಿತ ಜಂಗಮ ಜಂಗಮಸಹಿತ ಪ್ರಸಾದ, ಪ್ರಸಾದಸಹಿತ ಮಹಾಲಿಂಗ. ಆದಿಲಿಂಗ ಅನಾದಿಶರಣನಾಗಿಬಂದು ಷಡುಸ್ಥಲವ ನಡೆದು ತೋರಿದ. ಅಂತಲ್ಲದೆ ಒಂದೊಂದ ಕಳೆದು ನಡೆದನೆಂದಡೆ ಸೋಪಾನದ ಕಟ್ಟೆಯ ಕಲ್ಲು ಬಿದ್ದಂತೆ. ಇದು ಆರಿಗೂ ಅಳವಡದು ಬಸವಣ್ಣಂಗಳವಟ್ಟಿತ್ತು. ಆ ಬಸವಣ್ಣನ ಭೃತ್ಯನಾಗಿರಿಸಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.