ಅರ್ಹನ್, ಬುದ್ಧ, ಚಾರ್ವಾಕ, ಮೀಮಾಂಸಕ, ನೀಲಪಟರೆಂಬವರು
ಕಾಯದರುಶನಂಗಳಲ್ಲಿ ದೀಕ್ಷಿತರಾಗಿ
ಸೌರ ಶಾಕ್ತೇಯ ವೈಷ್ಣವ ಗಾಣಾಪತ್ಯ ದರುಶನಂಗಳಂ ಹೊಕ್ಕು,
ಒಡಲ ಮುಡುಹಂ ಸುಟ್ಟು, ಮುಟ್ಟಿಯನಿಟ್ಟು
ಉಭಯಗೆಟ್ಟು ಶಿವಧ್ಯಾನವಿಲ್ಲದೆ ನರಕಕ್ಕಿಳಿದು
ಅಧಮರಾಗಿ ಹೋಗಿ ಎಂದು ಹೇಳಿತ್ತೆಯಾ ವೇದ?
`ಶಿವಾರ್ಚನವಿಹೀನಂ ತು ಜನ್ಮಮೃತ್ಯೂ ನ ಮುಂಚತಃ' ಎಂದುದಾಗಿ
ಮರಳಿ ಮರಳಿ ಜನ್ಮಕ್ಕೆ ಬಂದು
ಮಾಡಿದ ಕರ್ಮದಿಂದ ನರಕಕ್ಕಿಳಿದು ಮಗ್ನರಾಗಹೇಳಿತ್ತೆಯಾ ವೇದ?
`ಓಂ ಅಪ್ರಶಿಖಾಯಾಂ ತ್ವಾಮಯಾಧನ್ಯ ಜೀವಾಗಮತ್ (?)'
ಎಂದು ಹೇಳಿದ ಶ್ರುತ್ಯರ್ಥವನರಿಯದೆ
ಹೋತನಂ ಕೊಂದು ಹೋಮಂಗಿಕ್ಕಿ
ಚಾಂಡಾಲರಾಗ ಹೇಳಿತ್ತೆಯಾ ವೇದ?
ಶಿವಾರ್ಚಕಪದದ್ವಂದ್ವಯಜನಾದ್ಧಾರಣಾದಪಿ
ಶಿವನಾಮ್ನಸ್ಸದಾಕಾಲಂ ಜಪಾದ್ವಿಪ್ರೋ ಭವಿಷ್ಯತಿ
ಎಂಬರ್ಥವನರಿದು ಅರಿಯದೆ
ನರಕಕ್ಕಿಳಿಯ ಹೇಳಿತ್ತೆಯಾ ವೇದ?
`ಏವಂ ರುದ್ರಾಯ ವಿಶ್ವದೇವಾಯ
ರುದ್ರಪಾದಾಯ ದತ್ತಮಸ್ತು' ಎಂದುದಲ್ಲದೆ
`ವಿಷ್ಣುಪಾದಾಯ ದತ್ತಮಸ್ತು' ಎಂದು ಹೇಳುವ ವೇದ ಉಳ್ಳರೆ ಹೇಳಿ?
ಅದಂತಿರಲಿ, ಕಾಶಿಕಾಂಡದಲ್ಲಿ ಹೇಳಿದ ಪುರಾಣಾರ್ಥದ ಹಾಗೆ
ವ್ಯಾಧನ ಕೈಯಿಂದ ವಿಷ್ಣು ಹತವಾದನೆಂದಡೆ ಪರಿಣಾಮಿಸುವರು,
ವೀರಭದ್ರನ ಕೈಯಿಂದ ವಿಷ್ಣು ಹತವಾದನೆಂದಡೆ ಅದು ಮಿಥ್ಯವೆಂಬರು.
ಮಹಾಭಾರತದಲ್ಲಿ ವಿಷ್ಣು ಈಶ್ವರಂಗೆ ಬಿನ್ನಹಂ ಮಾಡಿದುದು:
ಮನ್ನಾಥೋ ಲೋಕನಾಥಶ್ಚ ಅದ್ಯಕ್ಷರಸಮಾಯುತಃ
ಏಕ ಏವ ಮಹಾದೇವೋ ಮಹೇಶಾನಃ ಪರಸ್ಥಿತಃ
ಈಶ್ವರಸ್ಯ ಸಮೋ ನಾಸ್ತಿ ಬ್ರಹ್ಮಾ ವಿಷ್ಣುಶ್ಚ ಕಿಂಕರಃ
ಶಿವವಾಕ್ಯಸಮೋ ನಾಸ್ತಿ ವೇದಶಾಸ್ತ್ರಾಗಮೇಷು ಚ'
ಎಂಬ ಮಹಾವಿಷ್ಣುವಿನ ಮಹಾಭಾಷ್ಯವ ಕೇಳರಿಯಿರೇ,
ಓದಿದ ವೇದದ ಮಾತು ತಥ್ಯವೇ? ಅಲ್ಲ.
ನಿಮ್ಮಧಿದೇವತೆಯಾಗುತಂ ಇಹ ವಿಷ್ಣುವಿನ ಮಾತು ಮಿಥ್ಯವೆಂದರೆ ಬಿಡಿ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಯ್ಯನ ಜಾತನೆಂದಿಕ್ಕಿದೆ
ಮುಂಡಿಗೆಯನಾರ್ಪವರೆತ್ತಿಕೊಳ್ಳಿರೆ.