Index   ವಚನ - 54    Search  
 
ಇಚ್ಛಾ ಜ್ಞಾನ ಕ್ರಿಯಾ ಶಕ್ತಿ ನಿಮ್ಮಿಚ್ಛೆ ಎಂಬುದಂ ಬಲ್ಲೆ. ಸರ್ವವೂ ಶಿವನಾಜ್ಞೆಯೆಂಬುದಂ ಬಲ್ಲೆ. ಸರ್ವವೂ ಶಿವನಾಜ್ಞೆಯೆಂದು ನಿಮ್ಮಡಿಗಳು ಬೆಸಸಿದ ಸರ್ವಶ್ರುತಿಗಳಂ ಕೇಳಿ ಬಲ್ಲೆನು. ಈ ಹೀಂಗೆಂದರಿದು ಮನ ಮರಳಿ ಬಿದ್ದು ಗುರುಲಿಂಗಜಂಗಮಕ್ಕೆ ನಾನೂ ಮಾಡಿದೆನೆಂಬ ಅವಿಚಾರದ ಮನದ ಮರವೆಯ ನೋಡಾ. ಇದಿರ ಬೇಡಿದಡೆ ಕೊಡರೆಂಬ ಮನದ ಘಸಣಿಯ ನೋಡಾ. ಶಿವ ಶಿವ ಮಹಾದೇವ, ಮನೋನಾಥ ಮನೋಮಯ, ಎನ್ನ ಮನವ ಸಂತವ ಮಾಡಿ ನಿಮ್ಮಲ್ಲಿ ಬೆರಸು, ಬೆರಸದಿದ್ದಡೆ ನಿಮಗೆ ಮಹಾಗಣಂಗಳಾಣೆ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.