Index   ವಚನ - 78    Search  
 
`ಏಕ ಏವ ರುದ್ರೋ ನ ದ್ವಿತೀಯಃ' ನೆಂದು ಶ್ರುತಿ ಸಾರುತ್ತಿರೆ, ಮರಳಿ ವಿಷ್ಣುವಲ್ಲದೆ ದೈವವಿಲ್ಲವೆಂಬಿರಿ. ಅಚ್ಯುತಂಗೆ ಭವವುಂಟೆಂಬುದಕ್ಕೆ ಮತ್ಸ್ಯಕೂರ್ಮವರಾಹನಾರಸಿಂಹಾವತಾರವೆ ಸಾಕ್ಷಿ. ಹರಿ ಹರನ ಭೃತ್ಯನೆಂಬುದಕ್ಕೆ ರಾಮೇಶ್ವರಾದಿಯಾದ ಪ್ರತಿಷ್ಠೆಯೇ ಸಾಕ್ಷಿ. ಇಂತಪ್ಪ ಹರಿಯನು ಹರಂಗೆ ಸರಿಯೆಂದು ನುಡಿವುತ್ತಿಹ ವಿಪ್ರರ ಬಾಯಲ್ಲಿ ಸುರಿಯವೆ ಬಾಲಹುಳುಗಳು. ಹರಿಗೆ ಹತ್ತು ಪ್ರಳಯ, ಬ್ರಹ್ಮಂಗೆ ಅನಂತಪ್ರಳಯ. ನಮ್ಮ ಹರಂಗೆ ಪ್ರಳಯ ಉಂಟಾದರೆ, ಬಲ್ಲರೆ ನೀವು ಹೇಳಿರೆ! ನಿಮ್ಮ ವೇದದಲ್ಲಿ ಹೇಳಿಸಿರೆ! ಅರಿಯದಿರ್ದಡೆ ಸತ್ತ ಹಾಂಗೆ ಸುಮ್ಮನಿರಿರೆ. ಇದು ಕಾರಣ ನಮ್ಮ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರದೇವನೊಬ್ಬನೆ, ಎರಡಿಲ್ಲ.