Index   ವಚನ - 108    Search  
 
ಗುರುವನರಿವನ್ನಕ್ಕರ ಅಷ್ಟಾದಶ ವಿದ್ಯೆಯನರಿಯಲುಂಟು. ಓದಲುಂಟು ಕೇಳಲುಂಟು ಹೇಳಲುಂಟು. ಗುರುಕರುಣದಿಂದ ಗುರುವನರಿದ ಬಳಿಕ, ಗುರುವಲ್ಲದೆ ತಾನಿಲ್ಲ. ಕೇಳಲಿಲ್ಲ ಹೇಳಲಿಲ್ಲ, ಹೇಳಲಿಲ್ಲಾಗಿ ಅರಿಯಲಿಲ್ಲ. ಅರಿಯಲಿಲ್ಲದ ಅರಿವನರುಹಿಸಿದ ಗುರುವನರಿಯಲುಂಟೆ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.