Index   ವಚನ - 115    Search  
 
ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ ವಾಙ್‌ ಮಾನಸಾಗೋಚರವೆಂದು ಹೇಳುತ್ತೈದಾವೆ ವಾಕ್ಯಂಗಳು. ಅದಂತಿರಲಿ, ಐತಿಹಾಸಿಕರು ಪೌರಾಣಿಕರು ಆಗಮಿಕರು ಅರಿದರಾದಡೆ ದೃಶ್ಯನೆಂಬರೆ ಶಿವನನು? ಅದೃಶ್ಯನೆಂಬರೆ ಶಿವನನು? ವಾಙ್‌ ಮಾನಸಾಗೋಚರನೆಂಬರೆ ಶಿವನನು? ‘ಅತ್ಯತಿಷ್ಠದ್ದಶಾಂಗುಲಂ’ ‘ಏಕ ಏವ ಪುರುಷಃ’ ಎಂಬ ಶ್ರುತಿಯಿರಲು ಮತ್ತಚಿತ್ತನೆ ಶರಣನು? ಅಣುವಿನೊಳಗಣುವಾಗಿ, ಮಹತ್ತಿನೊಳಗೆ ಮಹತ್ತಾಗಿ, ಇಹಪರವೆಂಬ ಸಂದ ಹರಿದು, ಅಧ್ಯಕ್ಷತನಕ್ಕೆ ಕಾರಣಿಕನಾಗಿ ಇಹಲೋಕವೆ ಪರ, ಪರವೆ ಇಹಲೋಕ. ಅದು ಹೇಗೆಂದಡೆ: 'ನಿತ್ಯಂ ಲಿಂಗಾರ್ಚನಂ ಯಸ್ಯ ನಿತ್ಯಂ ಜಂಗಮಪೂಜನಂ ನಿತ್ಯಂ ಗುರುಪದಧ್ಯಾನಂ ನಿತ್ಯಂ [ನಿತ್ಯಂ]ನ ಸಂಶಯಃ' ಎಂಬ ಆಗಮವಾಕ್ಯವನರಿದು, ಗುರುವಿಂಗೆ ತನುಮುಟ್ಟಿ, ತ್ರಿವಿಧಲಿಂಗಕ್ಕೆ ಮನಮುಟ್ಟಿ, ತ್ರಿವಿಧಜಂಗಮಕ್ಕೆ ಧನಮುಟ್ಟಿ, ತ್ರಿವಿಧ ನಿವೇದಿಸಿ, ಆ ಗುರುವಿಂ ಶುದ್ಧ[ಪ್ರಸಾದವ]. ಆ ಲಿಂಗದಿಂ ಸಿದ್ಧ(ಪ್ರಸಾದವ). ಆ ಜಂಗಮದಿಂ ಪ್ರಸಿದ್ಧ[ಪ್ರಸಾದವ]ನವಗ್ರಹಿಸಿ ಈ ಲಿಂಗಾರ್ಚನೆಯ ಸ್ವಾನುಭಾವದಿಂದೇಕವ ಮಾಡಿ ಅರ್ಚಿಸಲಲ್ಲಿ ಶರಣರು ಸ್ವತಂತ್ರರು. ಅಂಗದಾಸೆಯಲ್ಲಿ ಹರಿವುದ ಬಿಟ್ಟ ನಿಸ್ಸಂಗಿಗಳು. ಶ್ರೋತ್ರ ನೇತ್ರ ತ್ವಕ್ಕು ಜಿಹ್ವೆ ಘ್ರಾಣ ಪಂಚೇಂದ್ರಿಯಂಗಳ ಶಿವನ ಮುಖವೆಂದರಿದು ಅನ್ಯಸಂಗಂಗಳಿಗೆ ಎಳಸಿ ಬಳಸಿ ಬಣ್ಣಕರಪ್ಪರೆ ಶರಣರು? 'ಲಿಂಗಾರ್ಚನವಿಹೀನಸ್ತು ದ್ವಿಜೋsಪಿ ಶ್ವಪಚಾಧಮಃ ಲಿಂಗಾರ್ಚನಪರೋ ನಿತ್ಯಂ ಶ್ವಪಚೋ[s]ಪಿ ದ್ವಿಜೋತ್ತಮಃ' ಎಂದುದಾಗಿ, ಅಮ್ಮ ಶರಣರಿಗೆ ಸರಿ ಉಂಟೆ ಲೋಕದೊಳಗೆ? ಶೂನ್ಯವೆನಿಸುವ ವಸ್ತುವ ರೂಹಿಂಗೆ ತಂದು ನೆರೆದು ತಾನೆ ರೂಪಾಗಬಲ್ಲ ಶರಣನು. ಆತನ ಮಹಾಮಹಿಮೆಗೆ ನಮೋ ನಮೋ ಎಂಬೆನು ಕಾಣಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.