ಜನನವೆಲ್ಲರಿಗುಳ್ಳ ಯೋನಿಗಳಲ್ಲಿ ಜನಿಸದೆ
ವಿಚಾರ ವಿಜ್ಞಾನದಿಂದ ವಿಚಾರಿಸಿ
ಶ್ರೀಗುರು ಕರುಣಾಮೃತಸಾಗರದಲ್ಲಿ ಜನಿಸಿದ
ಶಿಷ್ಯನ ಪರಮವಿವೇಕವೆ ವೇದಾದಿವಿದ್ಯೆಗಳ ಸರ್ವಸಾರ.
ಆ ಸರ್ವಸಾರಾಯದ ಸಮರಸಸ್ವರೂಪೆ
`ಓಂ ನಮಃ ಶಿವಾಯ' ಎಂಬ ಮಂತ್ರವೇದ್ಯವಾವುದೆಂದಡೆ:
ಆ ಷಡಕ್ಷರಿಮಂತ್ರವೆ ಷಡಂಗ ಷಟ್ಸ್ಥಲಲಿಂಗ
ಹಸ್ತ ಮುಖ ದ್ರವ್ಯ ಅರ್ಪಣ ಪ್ರಸಾದ ಪ್ರಸಾದಭೋಗ ಸಂತೃಪ್ತಿ.
ಇಂತೀ ಸತ್ಯ ನಿತ್ಯ ನಿರಂಜನ ಸಹಜ ಸನ್ಮಾರ್ಗವ
ಸಾಧಿಸಿದರು ನಮ್ಮ ಪುರಾತನರು.
ಇದನರಿದ ಮಹಾಂತನೆ ವೇದ್ಯನು,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.