Index   ವಚನ - 119    Search  
 
ಜನಿತವಿಲ್ಲದ [ಜನಿತ]ನಾದ ಹರನೆ, ನೀನು ನಿರೂಪನು. ಎನ್ನ ಭಕ್ತರು ರೂಪರುಯೆಂದಹರೆ ಅಲ್ಲಲ್ಲ, ಎನ್ನ ಭಕ್ತರೆ ನಿರೂಪರು. ಹೆಸರಿಲ್ಲದ ವಸ್ತುವ ತಂದು ಹೆಸರಿಟ್ಟು ಕರುಹುಗೊಂಡುದಿದೆಂದು ಅರಿಯಬಾರದಾತನ ತಂದು ಕುರುಹಿಟ್ಟು ಪಾಲಿಸಿದರಾದಕಾರಣ ದೇವನಾದೆ. ಒಡಲುಗೊಂಡವರ ಜರಿಯಲೇತಕೆ? ನೀನೊಮ್ಮೆ ಒಡಲುಗೊಂಡು ನೋಡಾ. ಜಾಗ್ರತ್‍ಸ್ವಪ್ನಸುಷುಪ್ತಿಯಲ್ಲಿ ನಿನ್ನ ಧ್ಯಾನವಲ್ಲದೆ ಅನ್ಯಧಾನ್ಯವುಂಟೆ ಎನ್ನವರಿಗೆ? ನಿನ್ನ ಹೊಗಳಿ ಹೊಗಳಲಾರದೆ ಆ ವೇದಂಗಳು ವಾಙ್ಮನಕ್ಕಗೋಚರನೆಂದವು, ಕಾಣಬಾರದ ಶೂನ್ಯನೆಂದವು. ಇಂತೀ ಪರಿಯಲಿ ಶ್ರುತಿಗಳು ಹೊಗಳಿದವು. `ಯಜ್ಞೇನ ಯಜ್ಞಮಯಜನ್ತ ದೇವಾಃ ತಾನಿ ಧರ್ಮಾಣಿ ಪ್ರಥಮಾನ್ಯಾಸನ್ ತೇ ಹ ನಾಕಂ ಮಹಿಮಾನಸ್ಸಚಂತೇ ಯತ್ರಪೂರ್ವೇ ಸಾಧ್ಯಾಸ್ಸಂತಿ ದೇವಾಃ' ಎಂದವು ಶ್ರುತಿ. ನಿನ್ನಾಯತವ ಎಮ್ಮ ಶರಣರೇ ಬಲ್ಲರು. ಆಗಮ ಶ್ರುತಿ ಪುರಾಣಂಗಳ ಹಾಂಗೆ ಶೂನ್ಯವ ಹೇಳುವರೆ ನಿಮ್ಮ ಶರಣರು? .ನಿತ್ಯನೆಂದು ದಿಟಪುಟ ಮಾಡಿ ಸದ್ಭಕ್ತರ ಹೃದಯ ಮನ ಶಾಸನ ಮಾಡಬಲ್ಲ ಶರಣರು, ಶಿವಂಗೆ ಜನಕರು ಕಾಣಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.