'ತಾನು ಸಾವ ಕನಸ ಕಂಡಡೆ ಎದ್ದು ಕುಳ್ಳಿರಿ' ಎಂಬ ಲೋಕದ
ನಾಣ್ನುಡಿ ದಿಟ ಲೇಸು.
ಸಾಯಬಹುದೆ ಸತಿಯ ಬಿಟ್ಟು, ಸುತರ ಬಿಟ್ಟು,
ಸಕಲಭೋಗಾಕ್ರೀಗಳಂ ಬಿಟ್ಟು?
ಇನ್ನು ದಿಟ ದಿಟ ಕೃತಯುಗ
ತ್ರೇತಾಯುಗ ದ್ವಾಪರಯುಗದಲ್ಲಿ
ಹರಿಶ್ಚಂದ್ರ, ರಾಮ, ರಾವಣಾದಿಗಳು ಸತ್ತರು.
ಕಲಿಯುಗದಲ್ಲಿ ಅನಂತರು ಸತ್ತರು.
ನಿನ್ನ ಪಿತೃಪಿತಾಮಹರೂ ಸತ್ತರು.
ನಿನ್ನ ಜೇಷ್ಠಕನಿಷ್ಠರುಗಳೂ ಸತ್ತರು ಕಾಣಾ.
ಹೀಗೆ ಕಂಡು ಕೇಳಿಯೂ ಮರುಳು ಮಾನವಾ,
ಸಾವು ದಿಟವೆಂದರಿ, ಸಂದೇಹ ಬೇಡ.
ಸಾಯಲ್ಕೆ ಮುನ್ನ ಧನ ಕೆಡದ ಹಾಗೆ ಸತ್ಪಾತ್ರಕ್ಕೆ ಮಾಡಿ,
ಮನ ಕೆಡದ ಹಾಗೆ ಶಿವನನ್ನೇ ಧ್ಯಾನಿಸಿ,
ತನು ಕೆಡದ ಹಾಗೆ ಶಿವನನ್ನೇ ಪೂಜಿಸು.
'ಬಾಲಂ ವೃದ್ಧಂ ಮೃತಂ ದೃಷ್ಟ್ವಾ ಮೃತಂ ವಿಷ್ಣ್ವಾದಿದೈವತಂ
ಅಹಂ ಮೃತೋ ನ ಸಂದೇಹೋ ಶೀಘ್ರಂ ತು ಶಿವಪೂಜನಂ'
ಎಂಬುದನರಿದು, ಮರೆಯಬೇಡ.
ಹೆಣ್ಣ ನಚ್ಚಿ, ಅಶುಭವ ಮಚ್ಚಿ, ಮರೆಯಬೇಡ,
ಅವಳು ನಿನ್ನ ನಂಬಳು.
ನೀನು ತನು ಮನ ಧನವನಿತ್ತಡೆಯೂ
ಪರಪುರುಷರ ನೆನೆವುದ ಮಾಣಳು.
ಅದನು ನೀನೇ ಬಲ್ಲೆ.
ಹೊನ್ನ ನಚ್ಚಿ ಕೆಡದಿರು
ಸತಿಸುತದಾಯಾದ್ಯರಿಂದಂ
ರಾಜಾದಿಗಳಿಂದಂ ಕೆಡುವುದು.
ಅಲ್ಲಿ ನೀನು ಸುಯಿಧಾನದಿಂ ರಕ್ಷಿಸಲು
ಧರ್ಮಹೀನನ ಸಾರೆ, ನಿಲ್ಲೆನೆಂದು
ನೆಲದಲಡಗಿ ಹೋಗುತ್ತಲಿದೆ,
ನೋಡ ನೋಡಲು,
ಹೋಗದ ಮುನ್ನ ಅರಿವನೆ ಅರಿದು,
ಮರೆವನೆ ಮರೆದು
ಮಾಡಿರಯ್ಯಾ, ಶಿವಮಹೇಶ್ವರರಿಗೆ
ತನು ಮನ ಧನವುಳ್ಳಲ್ಲಿ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
Art
Manuscript
Music
Courtesy:
Transliteration
Tānu sāva kanasa kaṇḍaḍe eddu kuḷḷiri' emba lōkada
nāṇnuḍi diṭa lēsu.
Sāyabahude satiya biṭṭu, sutara biṭṭu,
sakalabhōgākrīgaḷaṁ biṭṭu?
Innu diṭa diṭa kr̥tayuga
trētāyuga dvāparayugadalli
hariścandra, rāma, rāvaṇādigaḷu sattaru.
Kaliyugadalli anantaru sattaru.
Ninna pitr̥pitāmaharū sattaru.
Ninna jēṣṭhakaniṣṭharugaḷū sattaru kāṇā.
Hīge kaṇḍu kēḷiyū maruḷu mānavā,
sāvu diṭavendari, sandēha bēḍa.
Sāyalke munna dhana keḍada hāge satpātrakke māḍi,
mana keḍada hāge śivanannē dhyānisi,
Tanu keḍada hāge śivanannē pūjisu.
'Bālaṁ vr̥d'dhaṁ mr̥taṁ dr̥ṣṭvā mr̥taṁ viṣṇvādidaivataṁ
ahaṁ mr̥tō na sandēhō śīghraṁ tu śivapūjanaṁ'
embudanaridu, mareyabēḍa.
Heṇṇa nacci, aśubhava macci, mareyabēḍa,
avaḷu ninna nambaḷu.
Nīnu tanu mana dhanavanittaḍeyū
parapuruṣara nenevuda māṇaḷu.
Adanu nīnē balle.
Honna nacci keḍadiru
satisutadāyādyarindaṁ
rājādigaḷindaṁ keḍuvudu.
Alli nīnu suyidhānadiṁ rakṣisaluDharmahīnana sāre, nillenendu
neladalaḍagi hōguttalide,
nōḍa nōḍalu,
hōgada munna arivane aridu,
marevane maredu
māḍirayyā, śivamahēśvararige
tanu mana dhanavuḷḷalli
uriliṅgapeddipriya viśvēśvarā.