Index   ವಚನ - 160    Search  
 
ನೇತ್ರದಲ್ಲಿ ಷಡುವರ್ಣಸಂಬಂಧವಹ ಪವಿತ್ರ ಅಪವಿತ್ರವ ನೋಡಿ ಅರಿದು ಮಹಾಪವಿತ್ರವ ಮಾಡಿ ನೇತ್ರದ ಕೈಯಲೂ ಲಿಂಗನೇತ್ರಕ್ಕೆ ಅರ್ಪಿಸುವಲ್ಲಿ ನೇತ್ರೋದಕವು. ಶ್ರೋತ್ರದಲ್ಲು ಶಬ್ದ ಕುಶಬ್ದವನರಿದು ಮಹಾಶಬ್ದದಲ್ಲು ವರ್ತಿಸಿ ಶ್ರೋತ್ರದ ಕೈಯಲೂ ಲಿಂಗಶ್ರೋತ್ರಕ್ಕೆ ಅರ್ಪಿಸುವಲ್ಲಿ ಶ್ರೋತ್ರೋದಕವು. ಘ್ರಾಣದಿಂ ಸುಗಂಧ ದುರ್ಗಂಧವನರಿದು ಮಹಾಗಂಧದಲೂ ವರ್ತಿಸಿ ಘ್ರಾಣದ ಕೈಯಲೂ ಲಿಂಗಘ್ರಾಣಕ್ಕೆ ಅರ್ಪಿಸುವಲ್ಲಿ ಘ್ರಾಣೋದಕವು. ಜಿಹ್ವೆಯಿಂ ಮಧುರ ಆಮ್ಲ ಲವಣ ತಿಕ್ತ ಕಟು ಕಷಾಯವೆಂಬ ಷಡುರುಚಿಯನರಿದು ಮಹಾರುಚಿಯನರಿದು ರುಚಿಮಾಡಿ ಲಿಂಗಜಿಹ್ವೆಗೆ ಜಿಹ್ವೆಯ ಕೈಯಲೂ ಅರ್ಪಿಸುವಲ್ಲಿ ಜಿಹ್ವೋದಕವು. ಪರುಷನದಿಂ ಶೀತೋಷ್ಣವನರಿದು ಇಚ್ಚೆಯ ಕಾಲವನರಿದು ಪರುಷನದಿಂ ಲಿಂಗಪರುಷನಕ್ಕೆ ಅರ್ಪಿತವ ಮಾಡುವಲ್ಲಿ ಸ್ಪರ್ಶನೋದಕವು. ಸದ್ಭಕ್ತಿಯಿಂ ಪಾದಾರ್ಚನೆಯ ಮಾಡುವಲ್ಲಿ ಪಾದೋದಕವು. ಮಜ್ಜನಕ್ಕೆರೆವಲ್ಲಿ ಮಜ್ಜನೋದಕವು. ಆರೋಗಣೆಯಲ್ಲಿ ಆರೋಗಿಸಲಿತ್ತುದು ಅರ್ಪಿತೋದಕವು. ಆರೋಗಣೆಯಲ್ಲಿ ಮೇಲೆ ಹಸ್ತಕ್ಕೆರೆದುದು ಹಸ್ತೋದಕವು. ಗುರುಲಿಂಗ ಶಿವಲಿಂಗ ಜಂಗಮಲಿಂಗ ಒಂದೆಂದರಿದು ಸರ್ವಕ್ರಿಯಾಕರ್ಮಕ್ಕೆ ಲಿಂಗಸಂಬಂಧವ ಮಾಡಿ ಪ್ರಯೋಗಿಸುವುದು ಲಿಂಗೋದಕವು. ಈ ದಶೋದಕ ಕ್ರೀಯನರಿದು ವರ್ತಿಸುವುದು ಆಗಮಾಚಾರ ಕ್ರಿಯಾಸಂಪತ್ತು. ಅಯ್ವತೊಂದಕ್ಷರದಿಂ ಪುಟ್ಟಿದಂತಹ ವೇದಾದಿವಿದ್ಯಂಗಳು ಮೊದಲಾದ ಸರ್ವಕ್ರೀ ಕುಶಲಶಬ್ದಂಗಳನೂ ಶ್ರೋತ್ರದಿಂ ಲಿಂಗಶ್ರೋತ್ರಕ್ಕೆ ಅರ್ಪಿತವ ಮಾಡಿ ಶಬ್ದಭೋಗವ ಭೋಗಿಸುವರಲ್ಲಿ ಶಬ್ದಪ್ರಸಾದ. ಮೃದು ಕಠಿಣ ಶೀತೋಷ್ಣಂಗಳನೂ ಅಷ್ಟತನು ನೆಳಲು ಬಿಸಿಲು ಮೊದಲಾದ ವಸ್ತುಗಳನೂ ಪರುಷನದಿಂ ಲಿಂಗಪರುಷನಕ್ಕೆ ಅರ್ಪಿತವ ಮಾಡಿ ಪರುಷನ ಭೋಗವ ಭೋಗಿಸುವಲ್ಲಿ ಪರುಷನ ಪ್ರಸಾದ. ಶ್ವೇತ ಪೀತ ಹರೀತ ಮಾಂಜಿಷ್ಠ ಕೃಷ್ಣ ಕಪೋತ ಷಡುವರ್ಣ ಮೊದಲಾದ ಚಿತ್ರವಿಚಿತ್ರವರ್ಣಂಗಳನೆಲ್ಲವನೂ ನೇತ್ರದಿಂ ಲಿಂಗನೇತ್ರಕ್ಕೆ ಅರ್ಪಿಸಿ ನಿರೀಕ್ಷಿಸಿ ಅರ್ಪಿಸುವಲ್ಲಿ ರೂಪಪ್ರಸಾದ. ರಸಫಲ ಪಾಕಾದಿಗಳನೂ ಸರ್ವದ್ರವ್ಯಂಗಳನೂ ಷಡುರುಚಿ ಭಿನ್ನರುಚಿ ಮೂವತ್ತಾರನರಿದು ಜಿಹ್ವೆಯ ಕೈಯಲೂ ಲಿಂಗಜಿಹ್ವೆಗೆ ಅರ್ಪಿಸಲು ರಸಪ್ರಸಾದ. ಪುಷ್ಪಧೂಪ ನಾನಾ ಸರ್ವಸುಗಂಧವಸ್ತುಗಳನೂ ಘ್ರಾಣದಿಂ ಲಿಂಗಘ್ರಾಣಕ್ಕೆ ಅರ್ಪಿಸುವುದು ಸುಗಂಧಭೋಗವ ಭೋಗಿಸುವುದು ಗಂಧಪ್ರಸಾದ. ಈ ಪಂಚೇಂದ್ರಿಯದ ಕೈಯಲೂ ಪಂಚವಿಷಯಂಗಳ ಗುಣಂಗಳವಗುಣಂಗಳರಿದು ಅವಧಾನದಿಂದರ್ಪಿಸಿ ಸರ್ವಭೋಗವ ಭೋಗಿಸುವಲ್ಲಿ ಸನ್ನಹಿತಪ್ರಸಾದ. ಗುರುವಿಗೆ ತನು ಮನ ಧನವನರ್ಪಿಸಿ ಪ್ರಸನ್ನತೆಯ ಪಡೆವಲ್ಲಿ ಶುದ್ಧಪ್ರಸಾದ. ಲಿಂಗಕ್ಕೆ ತನು ಮನ ಧನವನರ್ಪಿಸಿ ಪ್ರಸನ್ನತೆಯ ಪಡೆವಲ್ಲಿ ಸಿದ್ಧಪ್ರಸಾದ. ಜಂಗಮಕ್ಕೆ ತನು ಮನ ಧನವನರ್ಪಿಸಿ ಪ್ರಸನ್ನತೆಯ ಪಡೆವಲ್ಲಿ ಪ್ರಸಿದ್ಧಪ್ರಸಾದ. ಗುರು ಲಿಂಗ ಜಂಗಮಕ್ಕೆ ಸರ್ವಪದಾರ್ಥ ಸರ್ವಭೋಗಂಗಳ ಭೋಗಿಸಲಿತ್ತು ಶೇಷಪ್ರಸಾದವ ಭೋಗಿಸುವುದು ಪದಾರ್ಥಪ್ರಸಾದ. ಕಾಮಾದಿಸರ್ವಭೋಗಂಗಳನೂ ಮನ ಬುದ್ಧಿ ಚಿತ್ತ ಅಹಂಕಾರವ ಏಕೀಭವಿಸಿ ಭಾವಲಿಂಗಕ್ಕೆ ಅರ್ಪಿಸಿ ಭೋಗಿಸುವುದು ಭಾವಪ್ರಸಾದ. ಪ್ರಾಣಲಿಂಗಕ್ಕೆ ಕಾಯವೆಂಬ ಭಕ್ತನು ಭಿನ್ನದೋರದೆ ಅವಿನಾಭಾವದಿಂ ಸರ್ವಕ್ರಿಯೆ ಲಿಂಗಕ್ರೀಯಾಗಿ ಏಕಾದಶಮುಖವರಿದು ಅರ್ಪಿಸಿ ಲಿಂಗಭೋಗೋಪಭೋಗಿಯಾಗಿಹುದೆ ಏಕಾದಶಪ್ರಸಾದ. ಇಂತೀ ಏಕಾದಶಪ್ರಸಾದವರಿದು ವರ್ತಿಸುವುದು ಸಹಜಶಿವಾಗಮಾಚಾರಕ್ರಿಯಾಸಂಪತ್ತು. ಇವೆಲ್ಲವನು ಮೀರಿ ಅತ್ಯತಿಷ್ಠದ್ಧಶಾಂಗುಲ ಲಿಂಗಕ್ಕೆ ಕಾಯವಾಗಿ ಆ ಲಿಂಗವೇ ಪ್ರಾಣವಾಗಿಪ್ಪ ಶರಣನು ವೇದ ಶಾಸ್ತ್ರಾಗಮ ಪುರಾಣಕ್ಕೆ, ದೇವ ದಾನವ ಮಾನವರಿಗೆ ಅತ್ಯತಿಷ್ಠದ್ಧಶಾಂಗುಲವೆನಿಸಿ `ಲಿಂಗಮಧ್ಯೇ ಶರಣಃ ಶರಣಮಧ್ಯೇ ಲಿಂಗಂ' ಎಂದೆನಿಸಿಪ್ಪ ಅವಿನಾಭಾವಸರ್ವಾಂಗಲಿಂಗಕ್ರೀಯ ನೀನೇ ಬಲ್ಲೆ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.