Index   ವಚನ - 182    Search  
 
ಪ್ರಥಮದಲ್ಲಿ ಬೀಜವಿಲ್ಲದಿದ್ದಡೆ ವೃಕ್ಷ ಅಂಕುರ ಪಲ್ಲವ ಶಾಖೆ ಕುಸುಮ ಫಲವೆಲ್ಲಿಯವಯ್ಯಾ? ಆ ಫಲದ ಮಹಾಮಧುರವೆಲ್ಲಿಯದಯ್ಯಾ? ಪರಶಿವಲಿಂಗಮೂರ್ತಿ ಪರಮಾತ್ಮ ಬ್ರಹ್ಮ ಬಯಲಾದಡೆ ನಿಷ್ಕಳತತ್ತ್ವಂಗಳೆಂತಾದವು? ಕೇವಲ ಸಕಲತತ್ತ್ವಂಗಳೆಂತದಾವು? ತಾನು ಹುಟ್ಟಿ ತಮ್ಮವ್ವೆ ಬಂಜೆ ಎನ್ನಬಹುದೇ? ಅರಸು ಒಬ್ಬನು ಸ್ವತಂತ್ರನು, ಸರ್ವಕ್ರೀ ವರ್ತಿಸಬಾರದು. ಪರಶಿವಲಿಂಗಮೂರ್ತಿ ಸರ್ವತತ್ತ್ವಮಯನಪ್ಪ, ಸರ್ವಕಾರಣಕ್ಕೆ ಕಾರಣನಪ್ಪ. ತನ್ನ ವಿನೋದಕ್ಕೆ ಪಂಚಭೂತಂಗಳನು ಇಚ್ಛಾಜ್ಞಾನಕ್ರಿಯಾಶಕ್ತಿಗಳನೂ ಬ್ರಹ್ಮವಿಷ್ಣ್ವಾದಿಗಳನೂ, ಅಷ್ಟಾದಶವಿದ್ಯಂಗಳನೂ ಮಾಡಿ ಉತ್ಪತ್ತಿ ಸ್ಥಿತಿಯನೂ ನೋಡಿ, ವಿನೋದಿಸಿ ಮಹಾಲೀಲೆಯಿಂ ಸಂಹರಿಸಿ ಪರಮಸುಖಿಯಾಗಿಪ್ಪನು. ಮತ್ತೆ `ಯಥಾಪೂರ್ವಮಕಲ್ಪಯತ್' ಎಂದುದಾಗಿ ಮರಳಿ ವಿನೋದಿಸುತಿರ್ಪನು. ಪರಶಿವಲಿಂಗಮೂರ್ತಿಪರಮಾತ್ಮನಲ್ಲಿ ಪರಬ್ರಹ್ಮ ಬಯಲಾದಡೆ ಗುರುವೆಂತಾದ ಜಂಗಮವೆಂತಾದ ಹೇಳಿರೆ? ಅಂತರಂಗ ಬಹಿರಂಗ ಪರಮಾಕಾಶಮಧ್ಯದಲ್ಲಿ ನಿಷ್ಕಳನು `ಶಿವಂ ಪರಾತ್ಪರಂ ಶೂನ್ಯಂ' ಎಂದುದಾಗಿ `ಶಿವಂ ಪರಮಾಕಾಶಮಧ್ಯೇ ಧ್ರುವಂ' ಎಂದುದಾಗಿ ಶ್ರೀಗುರುಮೂರ್ತಿಯಾಗಿಪ್ಪನು. ಭ್ರೂಮಧ್ಯದಲ್ಲಿ ಪರಂಜ್ಯೋತಿರ್ಲಿಂಗಮೂರ್ತಿಯಾಗಿಪ್ಪನು. `ಪರಾತ್ಪರಂ ಪರಂಜ್ಯೋತಿರ್ಭ್ರೂಮಧ್ಯೇ ತು ವ್ಯವಸ್ಥಿತಂʼ ಎಂದುದಾಗಿ. ಹೃದಯಸ್ಥಾನದಲ್ಲಿ ಪ್ರಾಣಲಿಂಗವು ಜಂಗಮಲಿಂಗವಾಗಿ ಸಕಲವ್ಯಾಪಾರನಾಗಿಪ್ಪನು. `ಹೃದಯಸ್ಯ ಮಧ್ಯೇ ವಿಶ್ವೇದೇವಾ ಜಾತವೇದಾ ವರೇಣ್ಯಃ' ಬ್ರಹ್ಮರಂಧ್ರದಲ್ಲಿ ಲಿಂಗಮೂರ್ತಿ ಪರಮಾತ್ಮ, ಭ್ರೂಮಧ್ಯದಲ್ಲಿ ಲಿಂಗಮೂರ್ತಿ ಅಂತರಾತ್ಮ, ಹೃದಯದಲ್ಲಿ ಜಂಗಮಮೂರ್ತಿ ಜೀವಾತ್ಮ, ಬಹಿರಂಗದಲ್ಲಿ ದೀಕ್ಷೆಗೆ ಗುರು, ಪೂಜೆಗೆ ಲಿಂಗ, ಶಿಕ್ಷೆಗೆ ಜಂಗಮ. `ಏಕಮೂರ್ತಿಸ್ತ್ರಿಧಾ ಭೇದಃ' ಎಂದುದಾಗಿ ಅಂತರಂಗ ಬಹಿರಂಗ ಸಕಲ ನಿಷ್ಕಲವೆಲ್ಲವೂ ಏಕೀಭವಿಸಿ `ಇಷ್ಟಂ ಪ್ರಾಣಸ್ತಥಾ' ಎಂದುದಾಗಿ ಲಿಂಗವಾಗಿ ಪೂಜೆಗೊಳ್ಳುತ್ತಿದ್ದಾನು. ಇದು ಕಾರಣ, ಸಕಲತತ್ತ್ವ ಸರ್ವಕಾರಣವಯ್ಯ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.