Index   ವಚನ - 184    Search  
 
ಪ್ರಸಾದವೆಂದು ಪ್ರಸಾದಿಗಳೆಂದು, ಪ್ರಸಾದವ ಕೊಂಡೆನೆಂದು ನುಡಿವುತ್ತಿರ್ಪರು. ಇನ್ನೆಂತಯ್ಯಾ ಶಿವಶಿವಾ! ಅರ್ಪಿತವಿಲ್ಲದೆ ಪ್ರಸಾದವಾದ ಪರಿಯೆಂತಯ್ಯಾ? ಆವಾವ ಪದಾರ್ಥಂಗಳನು ಆವಾವ ದ್ರವ್ಯಂಗಳನು ಎಹಗೆಹಗರ್ಪಿಸಿದಿರಿ, ಹೇಳಿರಣ್ಣಾ? ಪ್ರಸಾದವೇ ಹೇಂಗಾದುದು ಹೇಳಿರೆ? ಶಬ್ದ ಸ್ಪರ್ಶ ರೂಪು ರಸ ಗಂಧಂಗಳನು ಎಹಗೆಹಗೆ ಅರ್ಪಿಸುವಿರಿ ಹೇಳಿರೆ? ಅದು ಹೇಂಗರ್ಪಿಸಬಹುದು? ಪ್ರಸಾದವಲ್ಲದೆ ಕೊಳ್ಳೆನೆಂಬವರಿಗೆ ಅರ್ಪಿಸುವದಂತಿರಲಿ, ಮುನ್ನಿನ ಪ್ರಸಾದಿಗೆ ಅನರ್ಪಿತವ ನೆನೆವ ಪರಿಯೆಂತೊ? ಅನರ್ಪಿತವ ನೋಡುವ ಪರಿಯೆಂತೋ? ಅನರ್ಪಿತವ ಕೇಳುವ ಪರಿಯೆಂತೊ? ಅನರ್ಪಿತವ ವಾಸಿಸುವ ಪರಿಯೆಂತೊ? ಅನರ್ಪಿತವ ರುಚಿಸುವ ಪರಿಯೆಂತೊ? ಅನರ್ಪಿತವ ಸ್ಪರ್ಶಿಸುವ ಪರಿಯೆಂತೊ? ನೆನೆಯಬಾರದು, ನೋಡಬಾರದು, ಕೇಳಬಾರದು, ವಾಸಿಸಬಾರದು, ರುಚಿಸಬಾರದು, ಮುಟ್ಟಬಾರದು, ಶಿವಶಿವಾ, ತೊಡಕು ಬಂದಿತ್ತಲ್ಲಾ! ಅನರ್ಪಿತವ ಕೊಳಬಾರದು. 'ಸರ್ವಂ ಚ ತೃಣಕಾಷ್ಠಂ ಚ ಭಕ್ಷ್ಯಂ ಭೋಜ್ಯಾನುಲೇಪನಂ ಶಿವಾರ್ಪಿತಂ ವಿನಾ ಭುಂಜೇ ಭುಕ್ತಂ ಸದ್ಯೋ[s]ಪಿ ಕಿಲ್ಬಿಷಂ' _ಎಂದುದಾಗಿ, ಅರ್ಪಿಸಿದ ಪ್ರಸಾದವ ಕೊಳ್ಳಲೇ ಬೇಕು. ಇನ್ನೆಂತಯ್ಯಾ? ಆವನಾನೊಬ್ಬ ಪ್ರಸಾದಿಗೆ ಅನರ್ಪಿತವ ನೆನೆಯಬಾರದು. ಅರ್ಪಿಸುವ ಪರಿ ಇನ್ನೆಂತಯ್ಯಾ, ವರ್ಮ ಜ್ಞಾನಗದನ್ನಕ್ಕ? ಭಾವಶುದ್ಧವಾಗದನ್ನಕ್ಕ? ಆ ಲಿಂಗವಂತನು ಲಿಂಗಪ್ರಾಣವಾಗದನ್ನಕ್ಕ? ಮಹಾನುಭಾವರ ಸಂಗವಿಲ್ಲದನ್ನಕ್ಕ? ಇದು ಕಾರಣವಾಗಿ, ವರ್ಮಜ್ಞನಾಗಿ, ಭಾವಶುದ್ಧವಾಗಿ, ಲಿಂಗಪ್ರಾಣವಾಗಿ, ಮಹಾನುಭಾವರ ಸಂಗದಿಂದರಿದು ಅರ್ಪಿಸಿದ ಪ್ರಸಾದವ ಕೊಂಡು ಮುಕ್ತರಪ್ಪುದಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.