Index   ವಚನ - 279    Search  
 
ವ್ಯಾಸಾದಿಗಳಂತೆ ಶ್ವಾನಜ್ಞಾನಿಗಳಪ್ಪರೆ ಸತ್ಯಶುದ್ಧಶರಣರು? `ನ ದೇವಃ ಕೇಶವಾತ್ಪರಂ' ಎಂದ ವ್ಯಾಸ, ತನ್ನ ತೋಳುಗಳನೆರಡನು ಹೋಗಲಾಡನೆ? ಹಿಡಿಯರೆ ಅಂದು ಆಕಾಶಗಣಂಗಳು? ಮರಳಿ ಈಶ್ವರನಲ್ಲದೆ ದೈವವಿಲ್ಲೆಂದು ಶ್ರುತ್ಯರ್ಥವನರಿದು ದೇವಾರ್ಚನೆಯಂ ಮಾಡಲಾಗಿ ಆ ವ್ಯಾಸನ ಎರಡು ಕರಂಗಳು ಬಂದು, ಅಶೇಷವಂತಹ ಚರ್ಮ ಈಶ್ವರನ ಆಲಯದ ಮುಂದೆ ಧ್ವಜಪತಾಕೆಗಳಾಗದೆ? ಈರೇಳು ಲೋಕವು ಅರಿಯೆ. ಅನಂತಪುರಾಣಾಗಮಗಳಲ್ಲಿ ಕೇಳಿರೆ: ಈಶ್ವರಾರ್ಚನೆಯ ಮಾಡಿ ಮರಳಿ ವಿತಥವಾಗಿ ಪರದಾರಕಿಚ್ಚೈಸಿದಡೆ ಇವಂಗಿದೆ ಪ್ರಿಯವೆಂದು ಆ ಇಂದ್ರನ ಮೈಯೆಲ್ಲಾ ಅನಂಗನಂತಹ ಅಂಗವಾಗದೆ? ಈರೇಳು ಭುವನವರಿಯೆ. ಮರಳಿ ಈಶ್ವರಾರ್ಚನೆಯ ಮಾಡಲು ಆ ಅಂಗದ ಯೋನಿ[ಕೂ]ಪೆಲ್ಲಾ ನಯನಂಗಳಾಗವೆ ಇಂದ್ರಂಗೆ? ಇದನರಿದು ಶಿವಾರ್ಚನೆಯಂ ಮಾಡಿ ಶಿವನವರಿಗೆ ಧನಸಹಿತ ತ್ರಿವಿಧವ ನಿವೇದಿಸುವುದು ಶಿವಾಚಾರ ಕೇಳಿರಣ್ಣಾ. ಅರಿದರಿದು ಬರಿದೊರೆ ಹೋಗಬೇಡ. ಋಷಿಗಳ ಶಿವಾರ್ಚನೆಯ ವಿಶೇಷವಂತಹ ಫಲವ ಕೇಳಿರಣ್ಣಾ: ಕೀಳುಗುಲದ ಋಷಿಗಳ ಕುಲನಾಮಂಗಳ ತೊಡೆದು ಮೇಲುಗುಲನಾಮವ ಕೇಳಿರಣ್ಣಾ. ಅದು ಹೇಗೆಂದಡೆ: ಮುಖದಿಂದುತ್ಪತ್ಯವಾದ ಬ್ರಾಹ್ಮಣನು ಆ ಋಷಿಗಳ ಶಾಖೆಯಾದನು, ಅವರ ಗೋತ್ರವಾದನು. ಶಿವಾಚಾರ ವಿಶೇಷವೊ? ಕುಲ ವಿಶೇಷವೊ? ಹೇಳಿರಣ್ಣಾ. `ವರ್ಣಾನಾಂ ಬ್ರಾಹ್ಮಣೋ ಗುರುಃ' ಎಂಬ ಕ್ರೂರಹೃದಯರ ಮಾತ ಕೇಳಲಾಗದು. ಹೋಹೋ ಶಿವನ ಮುಖದಿಂದ ಹುಟ್ಟಿ ಉತ್ತಮವಂತಹ ಬ್ರಾಹ್ಮಣಧರ್ಮದಲ್ಲಿ ಜನಿಸಿದಂತಹ ವರ್ಣಿಗಳು ಕ್ಷತ್ರಿಯನ ಭಜಿಸ ಹೇಳಿತ್ತೆ ಈ ವೇದ? `ಶಿವ ಏಕೋ ಧ್ಯೇಯಃ ಶಿವಂಕರಃ ಸರ್ವಮನ್ಯತ್ಪರಿತ್ಯಜೇತ್' ಎಂದುದಾಗಿ_ ಶಿವನನೆ ಧ್ಯಾನಿಸಿ, ಇತರ ದೇವತೆಗಳ ಬಿಡಹೇಳಿತ್ತಲ್ಲವೆ? ಅದಂತಿರಲಿ, ಬಡಗಿ ಮಾಚಲದೇವಿಯ ಕುಲಜೆಯ ಮಾಡಿಹೆವೆಂದು ಸತ್ತ ಕಪಿಲೆಯ ಕಡಿದು ಹಂಚಿ ತಿನ್ನ ಹೇಳಿತ್ತೆ ವೇದ? ಆಗದು ಅವದಿರ ಸಂಗ. ಅಧಮರ ವರ್ಣಾಶ್ರಮಹೀನರ ಕರ್ಮವ ಕಳೆದೆಹೆವೆಂದು ದತ್ತಪುತ್ರರಾಗಿ ಹೊರಸಿನಡಿಯಲಿ ನುಸುಳ ಹೇಳಿತ್ತೇ ಆ ವೇದ? ಅದಂತಿರಲಿ,ಭುಂಜಿಸಿ ಮುಕ್ತಿಯನಿತ್ತಿಹೆವೆಂದಡೆ ಹಲ ಕೆಲ ಕಾಲ ವಂದಿಸಿದ ಗೌತಮಂಗೆ ಬಾರದೆ ಅಂದು ಗೋವಧೆ? ಅದಂತಿರಲಿ, ಬ್ರಾಹ್ಮಣರೆ ದೈವವೆಂದು ದಾನಾದಿಗಳ ಮಾಡಿದ ಕರ್ಣನ ಶಿರಕವಚ ಹೋಗದೆ ಜಗವರಿಯೆ? ವಿಷ್ಣುದೈವವೆಂದರ್ಚಿಸಿದ ಬಲಿ ಬಂಧನಕ್ಕೆ ಬಾರನೆ ಮೂಜಗವರಿಯೆ? ಶಿಬಿಯ ಮಾಂಸವ ಕೊಂಡು ಇತ್ತ ಮುಕ್ತಿಯ ಕೇಳಿರಣ್ಣಾ. ಅವಂಗೆ ಬಂದ ವಿಧಿಯ ಹೇಳಲಾಗದು. ಅದಂತಿರಲಿ, ಶಿವನ ಭಕ್ತರಿಗೆ ಪರಮಾಣುವಿನಷ್ಟು ಕಾಂಚನವನೀಯೆ ಅಣಿಮಾದ್ಯಷ್ಟಮಹದೈಶ್ವರ್ಯವನೀವರು, ಮೇಲೆ ಮುಕ್ತಿಯಹುದು. ಸಕೃತ್ ಲಿಂಗಾರ್ಚಕೇ ದತ್ವಾ ಸುವರ್ಣಂ ಚಾಣುಮಾತ್ರಕಂ ಭೂಲೋಕಾಧಿಪತಿರ್ಭೂತ್ವಾ ಶಿವ ಸಾಯುಜ್ಯಮಾಪ್ನುಯಾತ್' ಎಂದುದಾಗಿ, ಅದಲ್ಲದೆ ಮತ್ತೆ ದಾನಪರಿಗ್ರಹಂಗಳಂ ಕೊಂಡ ಕೆಲಬರ ಮುಕ್ತರ ಮಾಡಿ ಶಿವಲೋಕಕ್ಕೆ ಕೊಂಡೊಯ್ದುದುಂಟಾದಡೆ ಹೇಳಿರಣ್ಣಾ? ನಿತ್ಯಂ ಲಿಂಗಾರ್ಚನಂ ಯಸ್ಯ ನಿತ್ಯಂ ಜಂಗಮಪೂಜನಂ ನಿತ್ಯಂ ಗುರುಪದಧ್ಯಾನಂ ನಿತ್ಯಂ ನಿತ್ಯಂ ನ ಸಂಶಯಃ' ಇದು ಕಾರಣ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಯ್ಯನ ಶರಣಮಹಾತ್ಮೆಯನ್ನು ಯಜುರ್ವೇದ ಸಾಕ್ಷಿಯಾಗಿ ಪೇಳುವೆ ಕಾಶಿಯ ಕಾಂಡದಲ್ಲಿ.