Index   ವಚನ - 283    Search  
 
ಶರಣರ ಸಂಗ ಸಾಲೋಕ್ಯಪದವಯ್ಯಾ. ಗಣಂಗಳ ಮುಖಾವಲೋಕನ ಪ್ರಿಯಸಂಭಾಷಣೆ ಸಾಮೀಪ್ಯಪದವಯ್ಯ. ಶ್ರೀವಿಭೂತಿ ರುದ್ರಾಕ್ಷಿ ಪ್ರಮಥರ ಶ್ರೀಮೂರ್ತಿಯ ಕಂಡು ಮನದಲ್ಲಿ ಧರಿಸಿದಡೆ, ಸಾರೂಪ್ಯಪದವಯ್ಯಾ. ಪುರಾತನರ ಶ್ರೀಪಾದಂಗಳಲ್ಲಿ ಎನ್ನ ಶಿರಸ್ಪರ್ಶನದಿಂದ ಸಾಷ್ಟಾಂಗವೆರಗಲು, ಸಾಯುಜ್ಯಪದವಯ್ಯಾ. ಇಂತೀ ಸಾಲೋಕ್ಯ, ಸಾಮೀಪ್ಯ, ಸಾರೂಪ್ಯ, ಸಾಯುಜ್ಯವೆಂಬ ಚತುರ್ವಿಧಪದವೆನಗಾಯಿತ್ತಯ್ಯಾ ನಿಮ್ಮ ಗಣಂಗಳ ಕರುಣದಿಂದ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.