ಶ್ರೀಗುರುಲಿಂಗಜಂಗಮಕ್ಕೆ ತನುಮನಧನವನು
ವಂಚನೆಯಿಲ್ಲದೆ ಸದ್ಭಕ್ತಿಯಿಂದ ಅರ್ಪಿಸಿ ದಾಸೋಹಿಯಾದಡೆ ಸದ್ಭಕ್ತನು.
ಆ ಸದ್ಭಕ್ತನ `ಭಕ್ತಕಾಯ ಮಮಕಾಯ' ಎಂಬ
ಶಿವವಾಕ್ಯದಿಂದ ಅದು ಶಿವನ ತನು.
`ಯತೋ ವಾಚೋ ನಿವರ್ತಂತೇ' ಎಂಬ ಲಿಂಗವನು
ಶ್ರೀಗುರು ಕಣ್ಗೆ ಗೋಚರವ ಮಾಡಿ
ಕರಸ್ಥಳವಲ್ಲಿ ಬಿಜಯಂಗೈಸಿ ಕೊಟ್ಟ ಬಳಿಕ ಲಿಂಗಪ್ರಾಣಿ ಶಿವತನುವಾಯಿತ್ತು.
ಶಿವಜ್ಞಾನಸದ್ಭಕ್ತಿಸಂಪೂರ್ಣವಾದಡೆ ಸರ್ವಾಂಗಲಿಂಗ,
ಆ ಅಂಗಗುಣವೆಲ್ಲ ಲಿಂಗಗುಣ,
ಪಂಚೇಂದ್ರಿಯಂಗಳು ಲಿಂಗೇಂದ್ರಿಯಂಗಳು,
ಆ ಮಹಾಸದ್ಭಕ್ತನ ಕ್ರೀ ಲಿಂಗಕ್ರೀ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.