Index   ವಚನ - 332    Search  
 
ಸದ್ಭಕ್ತಿಯೆ ಆರು ಸ್ಥಲಕ್ಕೆ ಮುಖ್ಯ ಸದ್ಭಕ್ತಿಯ ಕೂಡಿಕೊಂಡು ಷಟ್‍ಸ್ಥಲವಿಪ್ಪುದು. ಇದು ಕಾರಣ: ಸದ್ಭಕ್ತಿಯಿಂ ಲಿಂಗದ-ಲಿಂಗವಂತರ ಸುಖವನು, ಮಹಿಮೆಯ ಪೂಜೆಯನು ಅರಿದು ಮರೆದು ವಿಷ್ಣು ಕಷ್ಟಜನ್ಮದಲ್ಲಿ ಬಂದನು. ಅರಿದು ಮರೆದು ಬ್ರಹ್ಮನು ಘನವೆಂದು ಶಿರವ ಹೋಗಾಡಿಕೊಂಡನು. ಅರಿದು ಮರೆದು ಇಂದ್ರನು ಭಂಗಿತನಾಗಿ ಐಶ್ವರ್ಯಮಂ ಹೋಗಾಡಿಕೊಂಡನು. ಅರಿದು ಮರೆದು ದಕ್ಷನು ಭಂಗಿತನಾಗಿ ಶಿರವ ಹೋಗಾಡಿಕೊಂಡನು. ಅರಿದು ಮರೆದು ವ್ಯಾಸನು ಹಸ್ತವ ಹೋಗಾಡಿಕೊಂಡನು. ಈ ದೃಷ್ಟವ ಹಲವು ಪುರಾತನರು ಕೇಳಿರಣ್ಣಾ: ಅರಿದು ಮರೆಯದೆ ನಂಬಲು ಸಿರಿಯಾಳನಿಗೆ ಶಿವಪದವಾಯಿತ್ತು. ಅರಿದು ಮರೆಯದೆ ನಂಬಲು ಸಿಂಧುಬಲ್ಲಾಳಂಗೆ ಶಿವಪದವಾಯಿತ್ತು. ಅರಿದು ಮರೆಯದೆ ನಂಬಲು ನಂಬಿಯಣ್ಣನ ಬೆನ್ನಿಲಿ ಶಿವ ಬಂದನು. ಅರಿದು ಮರೆಯದೆ ನಂಬಲು ನಿಂಬವ್ವೆಗೆ ಶಿವಪದವಾಯಿತ್ತು. ಅರಿದು ಮರೆಯದೆ ನಂಬಲು ಕೆಂಭಾವಿಯ ಭೋಗಣ್ಣನ ಬೆನ್ನಿಲಿ ಶಿವ ಬಂದನು. ಅರಿದು ಮರೆಯದೆ ನಂಬಲು ಪುರಾತನರೆಲ್ಲರು ಶಿವಪದಂಗಳ ಪಡೆದರು. ಇದನು ಶ್ರುತ ದೃಷ್ಟ ಅನುಮಾನದಿಂ ಕೇಳಿ, ನಿಶ್ಚೈಸಿ, ನಂಬಿ. ಅರಿವಿನ ಹದವಿದು, ಮರವೆಯ ಪರಿಯಿದು ಇಷ್ಟವಾದುದ ಹಿಡಿದು ಅನಿಷ್ಟವಾದುದ ಬಿಟ್ಟು ಅರಿವು ಸಯವಾಗಲು ಶಿವಪದವಪ್ಪುದು ತಪ್ಪದು, ಶಿವನಾಣೆ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.