Index   ವಚನ - 336    Search  
 
ಸದ್ಯೋಜಾತಮುಖವೇ ಪೃಥ್ವಿ ಎಂದರಿದಲ್ಲಿ ಸ್ಥಾವರಂಗಳಲ್ಲಿ ಪತ್ರಪುಷ್ಪದ ಹಂಗೇಕೆ? ವಾಮದೇವಮುಖವೇ ಅಪ್ಪುವೆಂದರಿದಲ್ಲಿ ಅಗ್ಗವಣಿಯಲ್ಲಿ ಮಜ್ಜನಕ್ಕೆರೆವ ಹಂಗೇಕೆ? ಅಘೋರಮುಖವೇ ಅಗ್ನಿ ಎಂದರಿದಲ್ಲಿ ಧೂಪದೀಪಾರತಿಗಳ ಹಂಗೇಕೆ? ತತ್ಪುರುಷಮುಖವೇ ವಾಯುವೆಂದರಿದಲ್ಲಿ ಮಂತ್ರತಂತ್ರದ ಹಂಗೇಕೆ? ಈಶಾನ್ಯಮುಖವೇ ಆಕಾಶವೆಂದರಿದಲ್ಲಿ ಧ್ಯಾನಮೌನದ ಹಂಗೇಕೆ? ಇಂತೀ ಪಂಚಬ್ರಹ್ಮವೇ ಪರಬ್ರಹ್ಮವೆಂದರಿದ ಶರಣಂಗೆ ಸರ್ವ ಉಪಚಾರಸಂಕಲ್ಪವೇಕೆ ಹೇಳಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.