ಸಾವುದು ದಿಟ ದಿಟ ನೋಡಾ.
ಅದು ಸಟೆಯೆಂದು ನಿತ್ಯವೆಂದನಿತ್ಯವ ನಂಬಿ
ಹೊನ್ನು ಹೆಣ್ಣು ಮಣ್ಣು ನಿನ್ನವೆಂದು ನಂಬಿರಲು
ಅವು ನಿನ್ನ ವಂಚಿಸಿ ಅನ್ಯರಿಗೆ ಹೋದುದನರಿಯಿರಿ.
ಅಯ್ಯೋ! ಅಯ್ಯೋ! ಕೆಡದಿರಿ ಕೆಡದಿರಿ, ಸತ್ಪಾತ್ರಕ್ಕೆ ಸಲಿಸಿ ಬದುಕಿರಯ್ಯಾ.
ಗುರುಲಿಂಗಜಂಗಮಕ್ಕೆ ಸದ್ಭಕ್ತಿಯಂ ದಾಸೋಹವಂ ಮಾಡಲು ನಿತ್ಯನು.
ಇದು ಸಟೆಯೆಂದು ನರಕಕ್ಕಿಳಿದು ಕೆಡದಿರಿ ಕೆಡದಿರಿ,
ಇದನರಿದು ಸಟೆಯ ದಿಟವ ಮಾಡದಿರಿ.
ಗುರುಲಿಂಗಜಂಗಮಕ್ಕೆ ದಾಸೋಹವ ಮಾಡುವುದೆ ದಿಟ.
ಇದು ಸತ್ಯ ಇದು ಸತ್ಯ, ಇದೇ ನಿತ್ಯ ಇದೇ ಯುಕ್ತಿ ಇದೇ ಭಕ್ತಿ,
ಇದೇ ಶಕ್ತಿ ಇದೇ ಮುಕ್ತಿ ಇದು ಸತ್ಯ.
ಶಿವ ಬಲ್ಲ, ಶಿವನಾಣೆ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.