ಹೊನ್ನು, ಹೆಣ್ಣು, ಮಣ್ಣು, ಅನ್ನ, ಉದಕ, ದ್ರವ್ಯಂಗಳು
ಧರ್ಮದಾಸೆಯ ಕಾರಣ, ಅರ್ಥದಾಸೆಯ ಕಾರಣ,
ಕಾಮದಾಸೆಯ ಕಾರಣ, ಮೋಕ್ಷದಾಸೆಯ ಕಾರಣ,
ಸಾಲೋಕ್ಯ ಸಾಮೀಪ್ಯ ಸಾರೂಪ್ಯ
ಸಾಯುಜ್ಯದಾಸೆಯ ಕಾರಣ,
ಪಂಚಮಹಾಪಾತಕಂಗಳ ಮಾಡಿದ ದೋಷಂಗಳ ಕಾರಣ,
ಅಧಿಕಾರಣ, ವ್ಯಾಧಿಕಾರಣ, ಕೀರ್ತಿಕಾರಣ, ವಾರ್ತೆಕಾರಣ,
ಸರ್ವವನು ನಿರಂತರ ಕೊಡುವರು.
ನಿಷ್ಕಾರಣವಾಗಿ ನಿರುಪಾಧಿಕರಾಗಿ,
ನಿರಾಶ್ರಿತರಾಗಿ ಶ್ರೀಗುರುಕಾರಣವಾಗಿ,
ಲಿಂಗಕಾರಣವಾಗಿ, ಜಂಗಮಕಾರಣವಾಗಿ,
ಪ್ರಸಾದಕಾರಣವಾಗಿ,
ಈ ನಾಲ್ಕನು ಒಂದು ಮಾಡಿ, ಸದ್ಭಕ್ತಿಯಿಂದ
ದ್ವಿವಿಧವು ಪರಿಣಾಮಿಸುವಂತೆ,
ಕ್ಷಣಮಾತ್ರದಲ್ಲಿ ಅಣುಮಾತ್ರದ್ರವ್ಯವ
ಕೊಡುವವರಾರನು ಕಾಣೆ, ನಿರ್ವಂಚಕರಾಗಿ.
ಆನು ವಂಚಕನು, ಎನಗೆ ಭಕ್ತಿ ಇಲ್ಲ.
ಶಿವ ಶಿವಾ, ಸಂಗನಬಸವಣ್ಣ ನಿರ್ವಂಚಕನು,
ನಿರಾಶಾಭರಿತನು,
ಸುಚರಿತ್ರನು, ಸದ್ಭಕ್ತಿಪುರುಷನು, ಮಹಾಪುರುಷನು.
ಎನಗೆ ಮಹಾ ಶ್ರೀಗುರುಲಿಂಗಜಂಗಮಪ್ರಸಾದ.
ಈ ಚತುರ್ವಿಧವು ಬಸವಣ್ಣನು.
ಈ ಬಸವಣ್ಣನ ಭೃತ್ಯರ ಭೃತ್ಯನಾಗಿ ಎನ್ನನಿರಿಸಯ್ಯ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.