Index   ವಚನ - 7    Search  
 
ಗುರುವಿದ್ದಂತೆ ಪರರಿಗೆ ನೀಡಬಹುದೆ? ಮನೆಯ ಆಕಳು ಉಪವಾಸ ಇರಲಾಗಿ ಪರ್ವತಕ್ಕೆ ಸೊಪ್ಪೆಯ ಹೊರಬಹುದೆ? ಎಂಬ ಪರವಾದಿ ನೀಕೇಳು. ಗುರುವು ಶಿಷ್ಯಂಗೆ ಲಿಂಗವ ಕೊಟ್ಟು ತಾನು ವ್ರತಗೇಡಿಯಾಗಿ ಹೋಗುವಲ್ಲಿ ಪರರ ಪಾದೋದಕ ಪ್ರಸಾದದಿಂದ ಪವಿತ್ರನಾದ ಕಾರಣ, ಪರರ ಕಂಡರೆ ತನ್ನಂತೆ ಕಾಣ್ಬುದು ಎಂದು ಗುರುವು ಹೇಳಿದ ವಾಕ್ಯವ ಮರೆದಿರಲ್ಲ? ಅಳಿಯ ಒಡೆಯರು, ಮಗಳು ಮುತ್ತೈದೆ, ಮನೆದೇವರಿಗೆ ಶರಣೆಂದರೆ ಸಾಲದೆ? ಎಂಬ ಅನಾಚಾರಿಗಳ ಮಾತು ಅದಂತಿರಲಿ. ಜಂಗಮ ದೇವರ ಪ್ರಾಣವೆಂಬ ಭಕ್ತರು ಲಿಂಗ ಜಂಗಮದ ಕೈಯ ಹೂವು, ಹಣ್ಣು, ಕಾಯಿ, ಪತ್ರೆ, ಹೋಗುವ ಬರುವ ಊಳಿಗವ ಕೊಂಬಾತ ಭಕ್ತನಲ್ಲ. ಅಲ್ಲಿ ಪೂಜೆಗೊಂಬಾತ ಜಂಗಮವಲ್ಲ ಇವರು ನಾಯಕ ನರಕಕ್ಕೆ ಯೋಗ್ಯರಯ್ಯಾ. ಇವರಿಬ್ಬರ ಉರಿಲಿಂಗಪೆದ್ದಿಗಳರಸ ಒಲ್ಲನವ್ವಾ.