Index   ವಚನ - 2    Search  
 
ಆಟವನಾಡಿ ಜವನಿಕೆಯ ಕಟ್ಟಿದ ಮತ್ತೆ ಭಾಷಾಂಗದ ಕ್ರೀಯುಂಟೆ? ಭಕ್ತಿಯನಾಶ್ರಯಿಸಿ ನಿರ್ಮುಕ್ತನಾದ ಮತ್ತೆ ಕೈಲಾಸಾದ್ರಿಯ ಆಶೆಯ ಘಾಸಿಯುಂಟೆ? ಅಳಿವುಳಿವ ತಿಳಿದು ಕಳಿದ ಮತ್ತೆ, ವಿರಕ್ತಿಯ ತೋರಿ ಕುಳವನರಿಯೆಂದು ಬೆಸಸಲುಂಟೆ? ಸತ್ತ ಹೆಣಕ್ಕೆ ಎವೆ ಹಳಚುವ ಹೊಳವಳಿಯುಂಟೆ? ಮತ್ತನಾದಾತ್ಮಂಗೆ ಚಿತ್ತದ ನಳನಳ ಶಬ್ದ[ವಾ]ಹೊತ್ತು ಕೇಳಬಲ್ಲುದೆ? ಇಂತೀ ಕರ್ಮಕ್ರೀಗಳೆಲ್ಲವೂ ಧರ್ಮದಲ್ಲಿ ನಷ್ಟವಾದ ಮತ್ತೆ ಸುಳುಹು ಶೂನ್ಯ ಒಳಗುಗೆಟ್ಟಿತ್ತು, ಒಳಗು ತೊಳಗಿ ಬೆಳಗಾಯಿತ್ತು. ಶುದ್ಧಸಿದ್ಧಪ್ರಸಿದ್ಧಪ್ರಸನ್ನ ಕುರುಂಗೇಶ್ವರಲಿಂಗದೊಳಗಾಗಲಾಗಿ.