Index   ವಚನ - 9    Search  
 
ಭಕ್ತಿಯೆಂಬ ಪೃಥ್ವಿಯಲ್ಲಿ ಗುರೂಪದೇಶವೆಂಬ ನೇಗಿಲಂ ಪಿಡಿದು, ಅಂತಃಕರಣ ಚತುಷ್ಟಯವೆಂಬ ಪಶುವಂ ಕಟ್ಟಿ ಓಂಕಾರನಾದವೆಂಬ ಸೆಳೆಕೋಲಂ ಪಿಡಿದು ಉತ್ತರ ಕ್ರೀಯೆಂಬ ಸಾಲನೆತ್ತಿ ದುಃಕರ್ಮವೆಂಬ ಕಂಟಕದ ಗುಲ್ಮವಂ ಕಡಿದು ಅರುಹೆಂಬ ರವಿಯ ಕಿರಣದಿಂದ ಒಣಗಿಸಿ ಅವಂ ಕೂಡಲೊಟ್ಟಿ, ಜ್ಞಾನಾಗ್ನಿಯೆಂಬ ಅಗ್ನಿಯಿಂದ ಸುಟ್ಟುರುಹಿ ಆ ಹೊಲನಂ ಹಸಮಾಡಿ, ಬಿತ್ತುವ ಪರಿ ಇನ್ನಾವುದಯ್ಯಾ ಎಂದಡೆ: ನಾದ. ಬಿಂದು, ಕಳೆ, ಮಳೆಗಾಲದ ಹದಬೆದೆಯನರಿದು ಸ್ಥೂಲವೆಂಬ ದಿಂಡಿಗೆ ತ್ರಿದೇವರೆಂಬ ತಾಳ ನಟ್ಟು ಇಡಾಪಿಂಗಳ ಸುಷುಮ್ನಾನಾಳವೆಂಬ ಕೋವಿಗಳ ಜೋಡಿಸಿ, ಮೇಲೆ ತ್ರಿಕೂಟಸ್ಥಾನವೆಂಬ ಬಟ್ಟಲಂ ಬಲಿದು, ಕುಂಡಲೀಸರ್ಪನೆಂಬ ಹಗ್ಗವ ಸೇದಿ ಕಟ್ಟಿ, ಹಂಸನೆಂಬ ಎತ್ತಂ ಹೂಡಿ, ಪ್ರಣವನೆಂಬ ಬೀಜವ ಪಶ್ಚಿಮ ಮುಖಕ್ಕೆ ಬಿತ್ತಿ, ಸರ್ವಶಾಂತಿ ನಿರ್ಮಲವೆಂಬ ಮೇಘ ಸುರಿಯಲ್ಕೆ ನೀಲಬ್ರಹ್ಮವೆಂಬ ಸಸಿ ಹುಟ್ಟಿತ್ತ. ಆ ಸಸಿಯ ಮುಟ್ಟುವ ಸಪ್ತವರ್ಣದ ಸದೆಯ ಕಳೆದು ಅಷ್ಟವರ್ಣದ ಅಲಬಂ ಕಿತ್ತು, ದಶವಾಯುವೆಂಬ ಕಸಮಂ ತೆಗೆದು, ಆ ಸಸಿ ಪಸರಿಸಿ ಪ್ರಜ್ವಲಿಸಿ ಫಲಕ್ಕೆ ಬರಲಾಗಿ ಚತುರ್ವಿಧವೆಂಬ ಮಂಚಿಗೆಯಂ ಮೆಟ್ಟಿ ಬಾಲಚಂದ್ರನೆಂಬ ಕವಣೆಯಂ ಪಿಡಿದು ಪ್ರಪಂಚುವೆಂಬ ಹಕ್ಕಿಯಂ ಸೋವಿ ಆ ಬತ್ತ ಬಲಿದು ನಿಂದಿರಲು, ಕೊಯ್ದುಂಬ ಪರಿ ಇನ್ನಾವುದಯ್ಯಾ ಎಂದಡೆ: ಇಷ್ಟವೆಂಬ ಕುಡುಗೋಲಿಗೆ ಪ್ರಣವವೆಂಬ ಹಿಡಿಯಂ ತೊಡಿಸಿ, ಭಾವವೆಂಬ ಹಸ್ತದಿಂ ಪಿಡಿದು, ಜನನದ ನಿಲವಂ ಕೊಯ್ದು, ಮರಣದ ಸಿವುಡ ಕಟ್ಟಿ, ಆಕಾಶವೆಂಬ ಬಣವೆಯನೊಟ್ಟಿ ಉನ್ಮನಿಯೆಂಬ ತೆನೆಯನ್ನರಿದು, ಮನೋರಥವೆಂಬ ಬಂಡಿಯಲ್ಲಿ ಹೇರಿ, ಮುಕ್ತಿಯೆಂಬ ಕೋಟಾರಕ್ಕೆ ತಂದು, ಅಷ್ಟಾಂಗಯೋಗವೆಂಬ ಜೀವಧನದಿಂದೊಕ್ಕಿ, ತಾಪತ್ರಯದ ಮೆಟ್ಟನೇರಿ, ಪಾಪದ ಹೊಟ್ಟ ತೂರಿ, ಪುಣ್ಯದ ಬೀಜಮಂ [ತ]ಳೆದು ಷಡುವರ್ಗ ಷಡೂರ್ಮೆಯೆಂಬ ಬೇಗಾರಮಂ ಕಳೆದು ಅಂಗಜಾಲನ ಕಣ್ಣ[ಮು]ಚ್ಚಿ, ಚಿತ್ರಗುಪ್ತರೆಂಬ ಕರಣಿಕರ ಸಂಪುಟಕೆ ಬರಿಸದೆ ಯಮರಾಜನೆಂಬರಸಿಗೆ ಕೋರನಿಕ್ಕದೆ ಸುಖ ಶಂಕರೋತಿ ಶಂಕರೋತಿ ಎಂಬ ಸಯಿದಾನವನುಂಡು ಸುಖಿಯಾಗಿಪ್ಪ ಒಕ್ಕಲಮಗನ ತೋರಿ ಬದುಕಿಸಯ್ಯಾ, ಕಾಮಭೀಮ ಜೀವಧನದೊಡೆಯ ಪ್ರಭುವೆ ನಿಮ್ಮ ಧರ್ಮ, ನಿಮ್ಮ ಧರ್ಮ.