ಹರಿವ ಹರಕುಳಿಯಲ್ಲಿ ಕೈಯನಿಕ್ಕಿ ನೋಡಿ
ಅಡಗಿದ್ದ ಆವೆಯ ಹಿಡಿದೆ.
ಒಂದು ಬಿಗಿದ ಬಿಲವ ಕಂಡು
ಏಗೆಯ್ದು ಕೈಯನಿಕ್ಕಿ ನೋಡಿ ಸಾಗಿಸಿ ಹಿಡಿದೆ,
ಉಭಯರಳಗೈಯಣ್ಣನ.
ಇಂತೀ ಸರುಹಿನ ತಪ್ಪಲಲ್ಲಿ
ನೆಪ್ಪ ನೋಡುತ್ತ ಹೋಗುತ್ತಿರಲಾಗಿ
ಮುಂದೆ ಒಂದು ಕಟ್ಟೆ ಕಟ್ಟಿದುದು ಕಂಡೆ.
ಆ ಕಟ್ಟೆಯೊಳಗೆ
ನೀರತಡಿಯಲ್ಲಿ ಕಪೋತ,
ಮಧ್ಯದಲ್ಲಿ ಪೀತ, ಕಡೆಯಲ್ಲಿ ಶ್ವೇತವಾಗಿದ್ದಿತು.
ಈ ತ್ರಿವಿಧದ ನೀರ ಹೊಳದು ನೋಡುತ್ತಿರಲಾಗಿ
ಎನ್ನ ಕಣ್ಣಿನ ಹೊಳಹುಗೂಡಿ ಹೊಳೆಯಿತ್ತೊಂದು ಮತ್ಸ್ಯ.
ಆ ಹೊಳಹಿನ ಬೆಂಬಳಿಯಲ್ಲಿ ತಿಳಿದು ಕಂಡೆಹೆನೆಂದಡೆ
ಉದಕವನೊಡಗೂಡಿದ ವರ್ಣ,
ವರ್ಣವನೊಡಗೂಡಿದ ಮತ್ಸ್ಯ ನೋಡಾ.
ಅದು ಎನಗೆ ಅಸಾಧ್ಯ,
ಸಿಕ್ಕಿದವೆರಡೇ ಸಾಕು.
ಆವೆಯ ಹೊಟ್ಟೆಯ ಕಳದು,
ಏಡಿಯ ಕಾಲ ಮುರಿದು,
ಇಷ್ಟೇ ಸಾಕೆಂದು ಬರುತ್ತಿರಲಾಗಿ,
ಒಂದು ಉಡುವ ಕಂಡೆ.
ದಡಿಯಲ್ಲಿ ಹೊಯ್ದೆ, ಆ ದಡಿ ಉಡುವಿನೊಳಡಗಿತ್ತು.
ಆ ಉಡು ತ್ರಿವಿಧದ ತಡಿಯಲ್ಲಿ ಒಡಗೂಡಿತ್ತು.
ಇದಕ್ಕೆ ಕಡೆ ನಡು ಮೊದಲ ಹೇಳಾ,
ಕದಕತನ ಬೇಡ ಕದಂಬಲಿಂಗಾ.