ಕ್ರಿಯಾಶಕ್ತಿ ಬ್ರಹ್ಮಂಗೆ ಸರಸ್ವತಿಯಾಗಿ ಬಂದುದನರಿದು,
ಇಚ್ಛಾಶಕ್ತಿ ವಿಷ್ಣುವಿಂಗೆ ಮಹಾಲಕ್ಷ್ಮಿಯಾಗಿ ನಿಂದುದನರಿದು,
ಜ್ಞಾನಶಕ್ತಿ ರುದ್ರಂಗೆ ಉಮಾದೇವಿಯಾಗಿ ಸಲೆ ಸಂದುದನರಿದು,
ಇಂತೀ ತ್ರಿವಿಧ ಶಕ್ತಿಗಳ ಮನೋಹರದಲ್ಲಿ
ತ್ರಿವಿಧ ಮೂರ್ತಿಗಳು ಆಡುವದ ಕಂಡು
ನಾನಾಸುಖ ಪರಿಪೂರ್ಣ ಕಳೆಯಿಂದ ಕ್ರಿಯಾಶಕ್ತಿ
ಅದರ ಸುಖೇಚ್ಛೆಯಿಂದ ಇಚ್ಛಾಶಕ್ತಿ
ಈ ಉಭಯಶಕ್ತಿ ಸನ್ಮತವಾಗಿ ನಿಂದ ಉಳುಮೆ ಜ್ಞಾನಶಕ್ತಿ.
ಇಂತೀ ತ್ರಿವಿಧ ಶಕ್ತಿಯ ಒಡಹುಟ್ಟಿ ನಾ ಬಂದೆ.
ಬ್ರಹ್ಮಂಗೆ ಕಿರಿದಂಗಿಯ ಕೊಟ್ಟು ಮೈದುನನ ಮಾಡಿಕೊಂಡೆ.
ವಿಷ್ಣುವಿಂಗೆ ನಡುವಳಾಕೆಯ ಕೊಟ್ಟು
ಬಿಡುಮುಡಿಯ ಮೈದುನನ ಮಾಡಿಕೊಂಡೆ.
ರುದ್ರಂಗೆ ಹಿರಿಯಕ್ಕನ ಕೊಟ್ಟು
ಎನ್ನೊಡಗೂಡುವ ಭಾವನ ಮಾಡಿಕೊಂಡೆ.
ಕಿರಿದಂಗಿಯ ಗಂಡ ಸತ್ತ, ನಡುದಂಗಿಯ ಗಂಡ ಬಿಟ್ಟ,
ಹಿರಿಯಕ್ಕನ ಕೊಂದ ಭಾವ.
ಇಂತೀ ಮೂವರ ಕೊಳುಕೊಡೆ
ದೃಷ್ಟ ಸಂಬಂಧ ನಷ್ಟವಾಯಿತ್ತು.
ಕಲುಹೃದಯದ ಕಲಕೇತಮಲ್ಲ ಬಂದೆ.
ಗೆಲ್ಲ ಸೋಲವೆಂಬ ತಗರ ಕೋಡ ಹಿಡಿದು
ಮೇಖಲೇಶ್ವರಲಿಂಗವಲ್ಲದಿಲ್ಲಾಯೆಂದು ನಲಿದು
ಕುಣಿದಾಡಬಂದೆ.
Art
Manuscript
Music
Courtesy:
Transliteration
Kriyāśakti brahmaṅge sarasvatiyāgi bandudanaridu,
icchāśakti viṣṇuviṅge mahālakṣmiyāgi nindudanaridu,
jñānaśakti rudraṅge umādēviyāgi sale sandudanaridu,
intī trividha śaktigaḷa manōharadalli
trividha mūrtigaḷu āḍuvada kaṇḍu
nānāsukha paripūrṇa kaḷeyinda kriyāśakti
adara sukhēccheyinda icchāśakti
ī ubhayaśakti sanmatavāgi ninda uḷume jñānaśakti.
Intī trividha śaktiya oḍahuṭṭi nā bande.
Brahmaṅge kiridaṅgiya koṭṭu maidunana māḍikoṇḍe.
Viṣṇuviṅge naḍuvaḷākeya koṭṭu
biḍumuḍiya maidunana māḍikoṇḍe.
Rudraṅge hiriyakkana koṭṭu
ennoḍagūḍuva bhāvana māḍikoṇḍe.
Kiridaṅgiya gaṇḍa satta, naḍudaṅgiya gaṇḍa biṭṭa,
hiriyakkana konda bhāva.
Intī mūvara koḷukoḍe
dr̥ṣṭa sambandha naṣṭavāyittu.
Kaluhr̥dayada kalakētamalla bande.
Gella sōlavemba tagara kōḍa hiḍidu
mēkhalēśvaraliṅgavalladillāyendu nalidu
kuṇidāḍabande.