Index   ವಚನ - 9    Search  
 
ಪಿಂಡದಲ್ಲಿ ಶಿವಜ್ಞಾನ ತಲೆದೋರಿದ ಲಕ್ಷಣವೆಂತೆಂದೊಡೆ: ಪೃಥ್ವಿ ಆಕಾಶದ ಮಧ್ಯದಲ್ಲಿ ತೋರುವ ತೋರಿಕೆಗಳು ಸ್ವರ್ಗ-ಮರ್ತ್ಯ-ಪಾತಾಳಂಗಳೆಂಬ ತ್ರಿಲೋಕಮಧ್ಯದಲ್ಲಿ ಪುಣ್ಯ-ಪಾಪ ಮೊದಲಾದ ಸರ್ವಕರ್ಮಂಗಳು ಕೃತಯುಗ, ತ್ರೇತಾಯುಗ, ದ್ವಾಪರ, ಕಲಿಯುಗದಲ್ಲಿ ಆಗು-ಚೇಗೆಗಳು- ಇದಲ್ಲದೆ ಪಂಚತತ್ವಮಿಶ್ರವಾದ ದೇಹ ಪ್ರಕೃತಿ ಮನ ಮೊದಲಾದ ಅರುವತ್ತಾರುಕೋಟಿ ಕರಣಂಗಳು ಇಂತೀ ಎಲ್ಲವು ಪರಶಿವಲಿಂಗದಿಂದುದಯವಾಗಿ, ತೋರಿ ತೋರಿ ಅಡಗುವುದಲ್ಲದೆ ನಿಜವಲ್ಲವೆಂದು ವಿಭಾಗಿಸಿ, ಪರಶಿವತತ್ವ ಒಂದೇ ನಿಜ, ಉಳಿದುವೆಲ್ಲ ಮಿಥ್ಯವೆಂದು ತಿಳಿವುದೇ ಅದೇ ಪರಮಜ್ಞಾನ. ಆ ಪರಮಜ್ಞಾನವೆಂಬಾತ ತಾನೆಂದು ತಿಳಿದಾತನೆ ಶಿವಜ್ಞಾನಿಶರಣನೆಂದನಯ್ಯಾ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.