ಶುಕ್ಲ ಶೋಣಿತಾತ್ಮಸಂಬಂಧವಾದ
ಮಾತಾಪಿತೃಗಳ ಸಂಯೋಗ ಕಾಲಕ್ಕೆ
ಜೀವಾತ್ಮರು ಜನಿಸಿದ ಪರಿಯ ಪೇಳುವೆ.
ಅದೆಂತೆಂದೊಡೆ :
ಜನಿಸಿದ ಮೂರುದಿವಸಕ್ಕೆ ಸ್ತ್ರೀಯರ ನಯನ ಕೆಂಪಾಗಿ
ಮೂರಾರು ದಿವಸಕ್ಕೆ ಕೈಕಾಲು ಕತ್ತರಿಸಿ
ಏಳೆಂಟು ದಿವಸಕ್ಕೆ ಅಂಗ ಜಾಡ್ಯವಾಗಿ
ಈರ್ಹತ್ತು ದಿವಸಕ್ಕೆ ಇಂದ್ರಿಯ ಹೆಪ್ಪುಗೊಂಡು
ಒಂದುಮಾಸಕ್ಕೆ ಮಾಂಸಗೊಂಡು
ಎರಡು ತಿಂಗಳಿಗೆ ಪಿಂಡಗಟ್ಟಿ ಬಯಕೆ ತೋರಿ
ಮೂರು ತಿಂಗಳಿಗೆ ಅಂಡಗಟ್ಟಿ ಹೇಸಿಕೆ ಹುಟ್ಟಿ
ನಾಲ್ಕು ತಿಂಗಳಿಗೆ ಅಂಗರೂಪು ಹುಟ್ಟಿ
ಐದು ತಿಂಗಳಿಗೆ ಅವಯವಂಗಳು ಹುಟ್ಟಿ
ಆರು ತಿಂಗಳಿಗೆ ಅವಯವಂಗಳು ಬಲಿದು
ಏಳು ತಿಂಗಳಿಗೆ ರೋಮ ಹುಟ್ಟಿ
ಇಂತೀ ಪರಿಯಲ್ಲಿ ಶಿವಕೃಪೆಯಿಂದ ಪಿಂಡವರ್ಧನವಾಗಲು,
ಇಂತಪ್ಪ ಪಿಂಡದಲ್ಲಿ ಶಿವಾಜ್ಞೆಯಿಂದ
ಆತ್ಮನು ಪ್ರವೇಶವಾದಾಕ್ಷಣವೇ ಗರ್ಭದಲ್ಲಿ ಶಿಶುವು ಉಲುಕುವುದು.
ಎಂಟು ತಿಂಗಳಿಗೆ ಕುಕ್ಕುಟಾಸನದಿಂದ ಶಿಶುವು
ಹುದುಗಿಕೊಂಡಿರ್ಪುದು.
ನವಮಾಸಕ್ಕೆ ಮರ್ಕಟಾಸನದಿಂದ ನೆಟ್ಟನೆ ಕುಳ್ಳಿರ್ದು ಶಿಶುವು
ಸರ್ಪನುಂಗಿದ ಇಲಿಯ ಹಾಂಗೆ
ಗರ್ಭವೆಂಬ ಸರ್ಪ ಶಿಶುವನೊಳಕೊಂಡಿರ್ಪುದು.
ಆ ಶಿಶುವಿಗೆ ಕ್ರಿಮಿಕೀಟಕ ಜಂತುಗಳು ಮೊದಲಾದ
ಅನೇಕ ಬಾಧೆಗಳುಂಟು.
ಆ ಬಾಧೆಗಳಿಂದ ಆ ಶಿಶುವು ತನ್ನ ಕೆನ್ನೆಗೆರಡು ಹಸ್ತವ ಹಚ್ಚಿ
ಊರ್ಧ್ವಮುಖವಾಗಿ ಶಿವಧೋ ಶಿವಧೋ ಎಂದು
ಶಿವಧ್ಯಾನವ ಮಾಳ್ಪ ಸಮಯದಲ್ಲಿ
ಹರಕರುಣದಿಂದ ಆ ಗರ್ಭವೆಂಬ ಮನೆಯ ಬಿಟ್ಟು
ಹೊರಡುವ ಸಮಯಕ್ಕೆ
ಆ ಶಿಶುವಿನ ದುಃಖವ ಪೇಳ್ವೆ :
ಕೋಟಿಸಿಡಿಲು ಹೊಯ್ದಂತೆ, ಸಾವಿರಚೇಳು ಕಡಿದಂತೆ,
ಧರ್ಮಿಷ್ಟರಾಜನು ಮೃತವಾದರೆ
ಅತಿ ಬಡವರಿಗೆ ದುಃಖವಾದ ಹಾಂಗೆ.
ಬಳಗುಳ್ಳ ಪುಣ್ಯಪುರುಷನು ಸಾಯಂಕಾಲದಲ್ಲಿ ಮೃತನಾಗಿ
ಪ್ರಾತಃಕಾಲದಲ್ಲಿ ಅವನ ಶವ ಎತ್ತುವಕಾಲಕ್ಕೆ
ಅವನ ಬಳಗಕ್ಕೆ ದುಃಖವಾದ ಹಾಂಗೆ.
ಆ ಮಾಯಾಯೋನಿಯೆಂಬ ಸೂಕ್ಷ್ಮ ಅಧೋದ್ವಾರದಿಂ ಆತ್ಮನು
ಅನೇಕ ದುಃಖ ದಾವತಿಯಿಂದ ಜನಿಸಲು
ಅಂತಪ್ಪ ಪಿಂಡಕ್ಕೆ ಯೋನಿ ಕಂಡರೆ ಹೆಣ್ಣೆಂಬರು
ಶಿಶ್ನವ ಕಂಡರೆ ಗಂಡೆಂಬರು.
ಒಳಗಿರುವ ಆತ್ಮನು ಹೆಣ್ಣು ಅಲ್ಲ, ಗಂಡು ಅಲ್ಲ
ನಿರಾಳ ಬ್ರಹ್ಮಾಂಶಿಕವು.
ಅದೆಂತೆಂದಡೆ:
ಪಾಪದದೆಸೆಯಿಂದ ಹೆಣ್ಣಾಗಿ ಜನಿಸುವುದು;
ಪುಣ್ಯದದೆಸೆಯಿಂದ ಪುರುಷನಾಗಿ ಜನಿಸುವುದು.
ಇಂತೀ ಪರಿಯಲ್ಲಿ ಇರುವೆ ಮೊದಲು ಆನೆ ಕಡೆ
ಎಂಬತ್ತುನಾಲ್ಕುಲಕ್ಷ ಜೀವರಾಶಿಯ ಯೋನಿಚಕ್ರಮಾರ್ಗದಲ್ಲಿ
ತಿರುಗಿ ತಿರುಗಿ ಭವರಾಟಾಳಮಾರ್ಗದಲ್ಲಿ
ದೇವ ದಾನವ ಮಾನವರು ಮೊದಲಾದ
ಸಕಲಜನರು ಬರುವದುಕಂಡು ಥರಥರನೆ ನಡುಗಿ
ಮರಳಿ ಈ ಜನನೀಜಠರಕ್ಕೆ ಬರಲಾರೆನೆಂದು ಅಂಜಿ
ನಿಮ್ಮ ಮರೆಹೊಕ್ಕನಯ್ಯಾ ನಿಮ್ಮ ಶರಣ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ.