ಶಿವಶಿವಾ, ಈ ಲೋಕದ ಮಾನವರನೇನೆಂಬೆನಯ್ಯಾ.
ಅದೆಂತೆಂದಡೆ:
ನಾವು ಗುರುಗಳು, ನಾವು ಲಿಂಗಾಂಗಿಗಳು,
ನಾವು ಜಂಗಮಲಿಂಗಿಗಳು,
ನಾವು ಸದಾಚಾರಸದ್ಭಕ್ತರು ಎಂಬರಯ್ಯ.
ಇಂತಿವರ ನಡತೆ ಆಚರಣೆಯೆಂತಾಯಿತೆಂದಡೆ:
ಒಬ್ಬಾನೊಬ್ಬ ಜಾತಿಹಾಸ್ಯಗಾರನು ವೇಷವ ಧರಿಸಿಕೊಂಡು
ಪುರಜನರ ಮೆಚ್ಚಿಸಿ, ತನ್ನ ಒಡಲಹೊರವಂತೆ,
ವಿಭೂತಿ ರುದ್ರಾಕ್ಷಿ ಕಾವಿ ಕಾಷಾಂಬರ ಮುಂತಾಗಿ ವೇಷವ ಧರಿಸಿ,
ಗುರು-ಹಿರಿಯರು ಜಂಗಮಲಿಂಗಿಗಳೆಂದು
ನಾಮವ ತಾಳಿ, ಭಕ್ತರಿಗೆ ಸದಾಚಾರಮಾರ್ಗವ ಹೇಳೇವು,
ಸದಮಲದ ಬೆಳಗ ತೋರೇವು ಎಂದು
ಧನಿಕರಿದ್ದೆಡೆಗೆ ಬಂದು, ನಿಮಗೆ ಉಪದೇಶವ ಹೇಳಿ,
ಲಿಂಗಾಂಗಸಮರಸವ ತೋರಿ,
ಮಾಂಸಪಿಂಡವಳಿದು ಮಂತ್ರಪಿಂಡವ ಮಾಡೇವು ಎಂದು ಹೇಳಿ,
ಆ ಭಕ್ತರ ಕೈಯಲ್ಲಿ ಅನ್ನ ಹಚ್ಚಡ ಹೊನ್ನು ವಸ್ತ್ರವ ತೆಗೆದುಕೊಂಡು
ಆ ಜಾತಿಕಾರನ ಹಾಗೆ ಇವರು ತಮ್ಮ ಉದರಾಗ್ನಿ
ಅಡಗಿಸಿಕೊಂಬುವರಲ್ಲದೆ
ಇಂತಪ್ಪ ಗುರು-ಶಿಷ್ಯರ, ದೇವ-ಭಕ್ತರೆಂಬುಭಯರ
ಆಚರಣೆಯೆಂತಾಯಿತ್ತೆಂದೊಡೆ-
ಹಂದಿಯ ಬಾಯೊಳಗಿನ ತುತ್ತ ನಾಯಿ ಬಂದು ಕಚ್ಚಿದಂತೆ.
ಅದೆಂತೆಂದೊಡೆ:
ಜೀವನಬುದ್ಧಿಯುಳ್ಳ ಗುರುವೆಂದಾತ ಹಂದಿ,
ಕರಣಬುದ್ಧಿಯುಳ್ಳ ಶಿಷ್ಯನೆಂಬಾತ ನಾಯಿ.
ಇಂತಪ್ಪ ಗುರು-ಶಿಷ್ಯರ ಸಮ್ಮೇಲನವು
ಹುಟ್ಟುಗುರುಡನ ಕೈಯ ಕಟ್ಟಿ ಲೊಟ್ಟಿಗಣ್ಣವ ಪಿಡಿದು
ಕಾಣದೆ ಕಮ್ಮರಿಬಿದ್ದಂತಾಯಿತಯ್ಯ.
ಅದೇನು ಕಾರಣವೆಂದಡೆ,
ಗುರುವಿನಂತುವ ಶಿಷ್ಯನರಿಯ,
ಶಿಷ್ಯನಂತುವ ಗುರುವರಿಯ,
ಜಂಗಮನಂತುವ ಭಕ್ತನರಿಯ,
ಭಕ್ತನಂತುವ ಜಂಗಮವರಿಯದ ಕಾರಣ.
ಉಪಾಧಿಯುಳ್ಳವರು ಗುರುವಲ್ಲ ಶಿಷ್ಯರಲ್ಲ.
ಉಪಾಧಿಯುಳ್ಳವರಲ್ಲಿ ಉಪದೇಶವ ಹಡೆಯಬೇಕೆಂಬವರ,
ಉಪಾಧಿಯುಳ್ಳವರಿಗೆ ಉಪದೇಶವ ಹೇಳಬೇಕೆಂಬವರ,
ಈ ಉಭಯಭ್ರಷ್ಟ ಹೊಲೆಮಾದಿಗರ
ಸೂರ್ಯಚಂದ್ರರು ಅಳಿದುಹೋಗುವ ಪರಿಯಂತರವು
ಹಂದಿ ನಾಯಿಯ ನರಕದಲ್ಲಿಕ್ಕದೆ ಬಿಡನೆಂದಾತ
ವೀರಾಧಿವೀರ ನಿಮ್ಮ ಶರಣ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ.
Art
Manuscript
Music
Courtesy:
Transliteration
Śivaśivā, ī lōkada mānavaranēnembenayyā.
Adentendaḍe:
Nāvu gurugaḷu, nāvu liṅgāṅgigaḷu,
nāvu jaṅgamaliṅgigaḷu,
nāvu sadācārasadbhaktaru embarayya.
Intivara naḍate ācaraṇeyentāyitendaḍe:
Obbānobba jātihāsyagāranu vēṣava dharisikoṇḍu
purajanara meccisi, tanna oḍalahoravante,
vibhūti rudrākṣi kāvi kāṣāmbara muntāgi vēṣava dharisi,
guru-hiriyaru jaṅgamaliṅgigaḷendu
nāmava tāḷi, bhaktarige sadācāramārgava hēḷēvu,
sadamalada beḷaga tōrēvu endu
dhanikariddeḍege bandu, nimage upadēśava hēḷi,
Liṅgāṅgasamarasava tōri,
mānsapiṇḍavaḷidu mantrapiṇḍava māḍēvu endu hēḷi,
ā bhaktara kaiyalli anna haccaḍa honnu vastrava tegedukoṇḍu
ā jātikārana hāge ivaru tam'ma udarāgni
aḍagisikombuvarallade
intappa guru-śiṣyara, dēva-bhaktarembubhayara
ācaraṇeyentāyittendoḍe-
handiya bāyoḷagina tutta nāyi bandu kaccidante.
Adentendoḍe:
Jīvanabud'dhiyuḷḷa guruvendāta handi,
karaṇabud'dhiyuḷḷa śiṣyanembāta nāyi.
Intappa guru-śiṣyara sam'mēlanavu
huṭṭuguruḍana kaiya kaṭṭi loṭṭigaṇṇava piḍidu
kāṇade kam'maribiddantāyitayya.
Adēnu kāraṇavendaḍe,
Guruvinantuva śiṣyanariya,
śiṣyanantuva guruvariya,
jaṅgamanantuva bhaktanariya,
bhaktanantuva jaṅgamavariyada kāraṇa.
Upādhiyuḷḷavaru guruvalla śiṣyaralla.
Upādhiyuḷḷavaralli upadēśava haḍeyabēkembavara,
upādhiyuḷḷavarige upadēśava hēḷabēkembavara,
ī ubhayabhraṣṭa holemādigara
sūryacandraru aḷiduhōguva pariyantaravu
handi nāyiya narakadallikkade biḍanendāta
vīrādhivīra nim'ma śaraṇa
kāḍanoḷagāda śaṅkarapriya cannakadambaliṅga
nirmāyaprabhuve.