ಇಂತಪ್ಪ ನಿರ್ಣಯವನರಿಯದೆ
ಪೃಥ್ವಿಯ ಮೇಲಣ ಕಣಿಯ ತಂದು ಕಲ್ಲಕುಟಿಗನಿಂದ ಕಟಿಸಿ,
ಲಿಂಗವೆಂದು ಹೆಸರಿಟ್ಟು,
ಹಳ್ಳ ನದಿ ಕೊಳ್ಳ ಕೆರೆ ಬಾವಿ ಮೊದಲಾದ ಉದಕವ ತಂದು,
ಮಜ್ಜನಕ್ಕೆರೆದು ಪಂಚಾಭಿಷೇಕದಿಂದ ಅಭಿಷೇಕವ ಮಾಡಿಸಿ,
ಬಿಲ್ವಪತ್ರಿ ಮೊದಲಾದ ನಾನಾ ಜೀನಸದ ಕಾಡಪತ್ರಿಯ ತಂದು
ಆ ಲಿಂಗಕ್ಕೇರಿಸಲು,
ಅಂತಪ್ಪ ಜಡಪಾಷಾಣಲಿಂಗವ ಭಕ್ತನ ಅಂಗದ ಮೇಲೆ,
ಸ್ವಾಯತವ ಮಾಡುವಾತ ಗುರುವಲ್ಲ,
ಆತ ಭಕ್ತನಲ್ಲ,ಅದು ಲಿಂಗವಲ್ಲ.
ಅದೇನು ಕಾರಣವೆಂದಡೆ:
ಶಿಲಾಭಾವ ಕಳೆದು ಕಳಾಭೇದವ ತುಂಬಿ,
ಜೀವಭಾವವಳಿದು ಶಿವಭಾವ ತುಂಬಿ,
ಅಂಗದಲ್ಲಿ ಲಿಂಗ ಕಳೆದೋರಿ, ಲಿಂಗದಲ್ಲಿ ಅಂಗ ಕಳೆದೋರಿ,
ಅಂಗಲಿಂಗವೆಂಬುಭಯಭಾವವಳಿದು
ಲಿಂಗವ ಕೊಡಬಲ್ಲಡೆ ಆತ ಗುರು ಎಂಬೆ;
ಇಂತೀ ಭೇದವ ತಿಳಿದು ಲಿಂಗವ ಕೊಳ್ಳಬಲ್ಲಡೆ ಶಿಷ್ಯನೆಂಬೆ.
ಇಂತಲ್ಲದೆ ತನು-ಮನ ಉಲ್ಲಾಸದಿಂದ
ಲಿಂಗವ ಕೊಟ್ಟಾತನು, ಆ ಲಿಂಗವ ಧರಿಸಿದಾತನು
ಈ ಉಭಯರು ಚಂದ್ರಸೂರ್ಯರಿರುವ ಪರ್ಯಂತರವು
ನರಕದಲ್ಲಿರ್ಪರು ಎಂದನಯ್ಯ ನಿಮ್ಮ ಶರಣ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ.