Index   ವಚನ - 80    Search  
 
ಇಂತಪ್ಪ ಪ್ರಣಮಮಂತ್ರಸಂಬಂಧವನು ಸ್ವಾನುಭಾವಗುರುಮೂರ್ತಿಗಳಿಂದ ವಿಚಾರಿಸಿಕೊಳ್ಳಬೇಕಲ್ಲದೆ, ಭಿನ್ನ ಜ್ಞಾನಗುರುಮೂರ್ತಿಗಳಿಂದ ವಿಚಾರಿಸಿಕೊಳ್ಳಲಾಗದು. ಅದೇನು ಕಾರಣವೆಂದಡೆ: ದ್ವಾದಶ ರುದ್ರಾಕ್ಷಿಮಾಲೆಯಂ ಮಾಡಿ, ಆ ದ್ವಾದಶ ರುದ್ರಾಕ್ಷಿಗೆ ದ್ವಾದಶಪ್ರಣಮವ ಸಂಬಂಧಿಸಿ, ಶಿಖಾರುದ್ರಾಕ್ಷಿಗೆ ನಿರಂಜನ ಅವಾಚ್ಯಪ್ರಣವವೆಂಬ ಹಕಾರ ಪ್ರಣಮವ ಸಂಬಂಧಿಸಿ, ಉದಯ ಮಧ್ಯಾಹ್ನ ಸಾಯಂಕಾಲವೆಂಬ ತ್ರಿಕಾಲದಲ್ಲಿ ಸ್ನಾನವ ಮಾಡಿ, ಏಕಾಂತಸ್ಥಾನದಲ್ಲಿ ಉತ್ತರವಾಗಲಿ ಪೂರ್ವವಾಗಲಿ ಉಭಯದೊಳಗೆ ಆವುದಾನೊಂದು ದಿಕ್ಕಿಗೆ ಮುಖವಾಗಿ ಶುಭ್ರವಸ್ತ್ರವಾಗಲಿ, ಶುಭ್ರರೋಮಶಾಖೆಯಾಗಲಿ, ಶುಭ್ರ ರೋಮಕಂಬಳಿಯಾಗಲಿ, ತೃಣದಾಸನವಾಗಲಿ, ನಾರಾಸನವಾಗಲಿ, ಇಂತೀ ಪಂಚಾಸನದೊಳಗೆ ಆವುದಾನೊಂದು ಆಸನ ಬಲಿದು, ಮೂರ್ತವ ಮಾಡಿ, ಇಷ್ಟಲಿಂಗಕ್ಕೆ ಅಷ್ಟವಿಧಾರ್ಚನೆ ಷೋಡಶೋಪಚಾರವ ಮಾಡಿ, ಆ ರುದ್ರಾಕ್ಷಿಮಾಲೆಗೆ ವಿಭೂತಿ ಅಗ್ಗಣಿ ಪತ್ರಿಯ ಧರಿಸಿ, ತರ್ಜನ್ಯವಾಗಲಿ ಅನಾಮಿಕ ಬೆರಳಾಗಲಿ ಉಭಯದೊಳಗೆ ದಾವುದಾದರೇನು ಒಂದು ಬೆರಳಿಗೆ ರುದ್ರಾಕ್ಷಿಯಂ ಧರಿಸಿ ಅದರೊಳಗೆ ದೀಕ್ಷಾಗುರು ಅಧೋಮುಖವಾಗಿ ರುದ್ರಾಕ್ಷಿಮಾಲೆಯ ಜಪಿಸೆಂದು ಪೇಳ್ವನು. ಮತ್ತಂ, ಕುರುಡರೊಳಗೆ ಮೆಳ್ಳನು ಚಲುವನೆಂಬ ಹಾಗೆ ಅಜ್ಞಾನಿಗಳೊಳಗಣ ಜ್ಞಾನಿಗಳು ಊರ್ಧ್ವಮುಖವಾಗಿ ರುದ್ರಾಕ್ಷಿ ಜಪಿಸೆಂದು ಪೇಳುವರು. ಇಂತಪ್ಪ ಸಂಶಯದಲ್ಲಿ ಮುಳುಗಿ ಮೂರುಲೋಕವು ಭವಭವದಲ್ಲಿ ಎಡೆಯಾಡುವುದು ಕಂಡು, ಶಿವಜ್ಞಾನ ಶರಣನು ವಿಸರ್ಜಿಸಿ ಸ್ವಾನುಭಾವಸೂತ್ರದಿಂ, ದ್ವಾದಶಪ್ರಣಮವ ಪೋಣಿಸಿ, ಅಧೋ ಊರ್ಧ್ವವೆಂಬ ವಿಚಾರವಿಲ್ಲದೆ ದಿವಾರಾತ್ರಿಯಲ್ಲಿ ನಿಮಿಷ ನಿಮಿಷವನಗಲದೆ ಮರಿಯದೆ ಜಪಿಸಿ ಸದ್ಯೋನ್ಮುಕ್ತನಾಗಿ ಶಿವಸುಖದಲ್ಲಿ ಸುಖಿಯಾಗಿರ್ದನಯ್ಯ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.