Index   ವಚನ - 81    Search  
 
ಮುಖದಲ್ಲಿ ಮಂತ್ರ, ಪಣೆಯಲ್ಲಿ ವಿಭೂತಿ, ಕೊರಳಲ್ಲಿ ರುದ್ರಾಕ್ಷಿ, ಹೃದಯದಲ್ಲಿ ಶಿವಲಿಂಗಸಜ್ಜೆಯ ಧರಿಸಿ, ಭಕ್ತಿಸ್ಥಲವನಾಚರಿಸುವ ಶರಣಜನಂಗಳು ಶಿವಗಣಂಗಳ ಕಂಡು ಹರಹರ ಶಿವಶಿವ ಶಿವಮಹಾದೇವ ಎಂದು ನಮಸ್ಕಾರವ ಮಾಡಿ, ಅವರ ಪಾದದ ಮೇಲೆ ಉರುಳಾಡಿ, ಅವರ ಪಾದಧೂಳವ ಸರ್ವಾಂಗದಲ್ಲಿ ಧರಿಸಿ, ತಮ್ಮ ತಮ್ಮ ಗೃಹಾಶ್ರಮಕ್ಕೆ ಬಿಜಯಂಗೈಸಿಕೊಂಡು ಹೋಗಿ, ಪಾದಾರ್ಚನೆಯಂ ಮಾಡಿ ಉನ್ನತಾಸನದ ಮೇಲೆ ಮುಹೂರ್ತವ ಮಾಡಿಸಿ, ಅಂಬಲಿ ಸೊಪ್ಪು ಮೊದಲಾದ ಪಂಚಾಮೃತವ ಎಡೆ ಮಾಡಿ, 'ಸ್ವಾಮೀ ಮನಃಪೂರ್ವಕ ಸಲಿಸೆಂ'ದು ಹಸ್ತ-ಪಾದವ ಜೋಡಿಸಿಕೊಂಡು 'ಶರಣಾರ್ಥಿ ಸ್ವಾಮಿ ಲಿಂಗಾರ್ಪಣವಾಗಲೆಂ'ದು ಅಡಿಗಡಿಗೆ ಇಚ್ಫಾಪದಾರ್ಥವ ಎಡೆಮಾಡಿ, ಅವರು ಸಲಿಸಿದ ಮೇಲೆ ವೀಳ್ಯ ಅಡಿಕೆಯ ನೀಡಿ, ಅವರ ಸುಖ-ದುಃಖವ ವಿಚಾರಿಸಿ, ಅವರಿಗೆ ಶಿವಕೊಟ್ಟ ದ್ರವ್ಯವನು ಭಿಕ್ಷವ ನೀಡಿ, ತಮ್ಮಾಪ್ತರಾದ ಬೀಗರು ಸ್ನೇಹಿತರು ಬಾಂಧವರು ಉಲ್ಲಾಸದಿಂದ ಸರ್ವರೂ ಕೂಡಿ ಊರಬಿಟ್ಟು ಹೊರಯಕ್ಕೆ ಬಂದು, ಒಬ್ಬರಿಗೊಬ್ಬರು ಶರಣು ಶರಣೆಂದು ಕಳಿಸಿದ ಹಾಗೆ, ಶಿವಗಣಂಗಳ ಪಾದಕ್ಕೆ ದೀರ್ಘದಂಡ ನಮಸ್ಕಾರವ ಮಾಡಿ, 'ಸ್ವಾಮಿ ಬರುವಂಥವರಾಗಿರಿ' ಎಂದು ಶರಣು ಮಾಡಿದಾತನೆ ಶಿವಭಕ್ತ; ಮೂರು ಲೋಕಕ್ಕೆ ಒಡೆಯನಾಗುವನು ನೋಡಾ, ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.