Index   ವಚನ - 93    Search  
 
ಗುರುವೆಂಬವನೇ ಹೊಲೆಯ. ಲಿಂಗಾಂಗಿ ಎಂಬವನೇ ಮಾದಿಗ. ಜಂಗಮವೆಂಬವನೇ ಸಮಗಾರ. ಈ ಮೂವರೊಳಗೆ ಹೊಕ್ಕು ಬಳಕೆಯ ಮಾಡಿದಾತನೇ ಭಕ್ತ. ಆ ಭಕ್ತನೆಂಬುವನೇ ಡೋರ. ಇಂತೀ ಚತುರ್ವಿಧ ಭೇದವ ತಿಳಿದು, ಪಾದೋದಕ ಪ್ರಸಾದವ ಕೊಡಬಲ್ಲರೆ ಗುರುಲಿಂಗಜಂಗಮವೆಂಬೆ. ಈ ನಿರ್ಣಯವ ತಿಳಿದು ಪಾದೋದಕ ಪ್ರಸಾದ ಕೊಳ್ಳಬಲ್ಲರೆ ಭಕ್ತ, ಮಹೇಶ್ವರ, ಪ್ರಸಾದಿ, ಪ್ರಾಣಲಿಂಗಿ, ಶರಣೈಕ್ಯರೆಂಬ ಷಟ್‍ಸ್ಥಲಬ್ರಹ್ಮಿ ಎಂಬೆ. ಆತನೇ ಅಚ್ಚಪ್ರಸಾದಿ, ನಿಚ್ಚಪ್ರಸಾದಿ, ಸಮಯಪ್ರಸಾದಿ, ಏಕಪ್ರಸಾದಿ. ಇಂತೀ ಕ್ರಮವರಿತು ಪಾದೋದಕ ಪ್ರಸಾದವ ಕೊಳ್ಳಬಲ್ಲರೆ ಮೋಕ್ಷವಾಗುವುದಕ್ಕೆ ತಡವಿಲ್ಲವಯ್ಯ. ಈ ಭೇದವ ತಿಳಿಯದೆ ಅಯ್ಯಾ, ಹಸಾದ ಮಹಾಪ್ರಸಾದ ಪಾಲಿಸಿರೆಂದು, ಕರುಣಿಸಿರೆಂದು ಕೃಪೆ ಮಾಡಿ ಭೂತದೇಹಿಗಳೆದುರಿಗೆ ಪಾತಕಮನುಜರು ಅಡ್ಡಡ್ಡ ಬಿದ್ದು ಎದಿ ವಡ್ಡುಗಟ್ಟಿ ಮೊಳಕಾಲು ಗೂಡುಗಟ್ಟಿ ಹಣೆ ಬುಗುಟಿ ಎದ್ದು ಈ ಪರಿಯಲ್ಲಿ ಅಯ್ಯಾ ಪ್ರಸಾದ ಪಾಲಿಸೆಂದು ಪಡಕೊಂಡು ಲಿಂಗಕ್ಕೆ ತೋರಿ ತೋರಿ ತಮ್ಮ ಉದರಾಗ್ನಿ ಅಡಗಿಸಿಕೊಂಡು, ಕಡೆಯಲ್ಲಿ ಎಣ್ಣೆಯ ನಾತಕ್ಕೆ ಅಲಗ ನೆಕ್ಕುವ ಶ್ವಾನನ ಹಾಗೆ ತಮ್ಮ ನಾಲಿಗಿಯಲಿ ತಳಗಿ ತಾಬಾಣವ ನೆಕ್ಕಿ ನೆಕ್ಕಿ, ಆ ತಳಗಿ ತಾಬಾಣ ಸವೆದು ಸಣ್ಣಾಗಿ ಹೋದವಲ್ಲದೆ, ಇಂತಪ್ಪ ಮತಿಭ್ರಷ್ಟ ಹೊಲೆಯ ಮಾದಿಗರಿಗೆ ಪರಶಿವನ ಮಹಾಪ್ರಸಾದ ಸಾಧ್ಯವೇ? ಸಾಧ್ಯವಲ್ಲ. ಮುಂದೆ ಎಂಬತ್ತುನಾಲ್ಕುಲಕ್ಷ ಯೋನಿದ್ವಾರದಲ್ಲಿ ತಿರುಗಿ ತಿರುಗಿ ಭವದತ್ತ ಮುಖವಾಗಿ ನರಕವನೆ ಭುಂಜಿಸುವದು ಉಂಟೆಂದ ನಿಮ್ಮ ಶರಣ ವೀರಾಧಿವೀರ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.