Index   ವಚನ - 132    Search  
 
ವಿಭೂತಿ ರುದ್ರಾಕ್ಷಿಯ ಧರಿಸಿ ಕಾಂಚನಕ್ಕೆ ಕೈ ಒಡ್ಡುವಾತ ಮಹೇಶ್ವರನಲ್ಲ. ಕಾವಿಕಾಷಾಂಬರ ಹೊದ್ದು ಶಿವಲಿಂಗಧಾರಣವಾಗಿ ಮೃಷ್ಟಾನ್ನಕ್ಕೆ ಮನಸೋಲುವಾತ ಮಹೇಶ್ವರನಲ್ಲ. ಕೌಪ ಖಟ್ವಾಂಗವ ಧರಿಸಿ ಪರಸ್ತ್ರೀಯರ ಕಂಡು ಮನಯೆಳಸುವಾತ ಮಹೇಶ್ವರನಲ್ಲ. ಜಂಗಮವ ಜರಿದು ಸ್ಥಾವರ ಪೂಜಿಸುವಾತ ಮಹೇಶ್ವರನಲ್ಲ ಇವರು ನಮ್ಮ ವೀರಮಾಹೇಶ್ವರರ ಸರಿ ಎಂದಡೆ ನಗುವರಯ್ಯಾ ನಿಮ್ಮ ಶರಣರು. ಅದೆಂತೆಂದಡೆ : ಭವಭಾರಿಗಳಾದ ಕಾರಣ. ಇಂತಪ್ಪ ಮಹೇಶ್ವರರ ಕಂಡಡೆ ಮೂಗುಕೊಯ್ದು ಮೂಕಾರ್ತಿಯ ಮದುವಿಯ ಮಾಡಿ ಹೊರಕೇರಿಯಲ್ಲಿರಿಸಿದ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವಿನ ಶರಣ.