Index   ವಚನ - 136    Search  
 
ಒಂದು ಜನ್ಮದಲ್ಲಿ ನಿನ್ನ ಕಲ್ಲದೇವರ ಮಾಡಿ ಪೂಜಿಸಿ, ಜೋಗಿ, ಜಂಗಮ, ಗೊರವನಾಗಿ ಪುಟ್ಟಿದೆ. ಒಂದು ಜನ್ಮದಲ್ಲಿ ನಿನ್ನ ಕಟ್ಟಿಗೆದೇವರ ಮಾಡಿ ಪೂಜಿಸಿ ಬಡಗಿ ಕಂಬಾರನಾಗಿ ಪುಟ್ಟಿದೆ. ಒಂದು ಜನ್ಮದಲ್ಲಿ ನಿನ್ನ ಮಣ್ಣುದೇವರ ಮಾಡಿ ಪೂಜಿಸಿ, ಬಾರಿಕ ತಳವಾರನಾಗಿ ಪುಟ್ಟಿದೆ. ಒಂದು ಜನ್ಮದಲ್ಲಿ ನಿನ್ನ ನೀರದೇವರ ಮಾಡಿ ಪೂಜಿಸಿ, ವಿಪ್ರನಾಗಿ ಪುಟ್ಟಿದೆ. ಒಂದು ಜನ್ಮದಲ್ಲಿ ನಿನ್ನ ಬೆಂಕಿಯ ದೇವರೆಂದು ಮಾಡಿ ಪೂಜಿಸಿ, ವಿಪ್ರಾಚಾರ್ಯನಾಗಿ ಪುಟ್ಟಿದೆ, ಇಂತಿವೆಲ್ಲವನು ನೀನೆಂದು ಭಾವಿಸಿ ಪೂಜಿಸುವಲ್ಲಿ, ಇಂತೀ ಭವದಲ್ಲಿ ನಾನು ಪುಟ್ಟಿದೆ. ಇಂತೀ ಜಡಸ್ವರೂಪ ನೀನಲ್ಲ, ನೀನು ನಿರಾಳ ನಿಃಶೂನ್ಯ ನಿರಾಕಾರನೆಂದು ಎನ್ನ ಕರಸ್ಥಲದಲ್ಲಿ ಅರಿದು ಪೂಜಿಸಿ ಸಕಲಕುಲದವರಿಗೆ ಹೊರತಾಗಿ ಕುಲಗೆಟ್ಟು ನಾನಾವಜನ್ಮಕ್ಕೆ ಹೊದೆನೆಂದರಿಯೆನಯ್ಯಾ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.