Index   ವಚನ - 148    Search  
 
ಪರ್ವತಕ್ಕೆ ಹೋಗಬೇಕಾದರೆ ಮನೆಯ ಸುಟ್ಟು, ಬಸವನ ಕೊಂದು, ಶಿಶುವಿನ ತಲೆಹೊಡೆದು, ಗುರುಲಿಂಗಜಂಗಮವ ಕೊಂದು, ತನ್ನ ಕೈಕಾಲು ತಲೆ ಛೇದಿಸಿ, ತಿದಿಯ ಹಿಡಿದು, ಕಾವಡಿಯನೊಡದು, ಸಾಲಮಾಡದೆ ತಾವು ಗಳಿಸಿದಂಥ ದ್ರವ್ಯವನೊಯ್ಯದೆ ಪೋಗಿ ಕೇಶವನೆಲ್ಲಾ ಬೋಳಿಸಿ, ಪಾತಾಳಗಂಗಿಯ ಸ್ನಾನವ ಮಾಡಿ, ಮನೆಯ ಸುಟ್ಟು ಬೂದಿಯ ಧರಿಸಿ, ಒಂದು ಪಾದವ ಹಿಂದಿಟ್ಟು, ಒಂದು ಪಾದವ ಮುಂದಿಟ್ಟು, ಎಡಕ ಬಂದವನ ಮೆಟ್ಟಿ, ಬಲಕ ಬಂದವನ ಕುಟ್ಟಿ, ಎದುರಿಗೆ ಬಂದವನ ಮೆಟ್ಟಿ, ಅವನಾಚೆಗೆ ದಾಟಿ ಹೋಗಬಲ್ಲರೆ, ಮಲ್ಲಯ್ಯನ ದರುಶನವಾಹುದು, ಆತನ ಶಿಖರ ಕಾಣುವದು. ಕಂಡಾಕ್ಷಣವೇ ನಿರ್ವಯಲಪದವಹುದು. ಇಂತಿದರ ವಿಚಾರವ ತಿಳಿಯಬಲ್ಲರೆ ಕಾಶಿ ಶ್ರೀಶೈಲಯಾತ್ರೆಯ ಮಾಡಬಲ್ಲವರು ಎಂದನಯ್ಯಾ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.