Index   ವಚನ - 162    Search  
 
ಅರಣ್ಯದ ಅಡ್ಡಗುಡ್ಡದ ಸರೋವರದಲ್ಲಿರುವ ಹಂದಿಯ ಉಕ್ಕಿನ ಬಿಲ್ಲತಂತಿಯ ನಾರಿಗೆ, ಗುರಿಯಿಲ್ಲದ ಸರಳ ಹೂಡಿ ಹೊಡೆಯಲು ಬಿಲ್ಲು ಮುರಿದು, ನಾರಿ ಹರಿದು, ಬಾಣ ತಾಗಿ, ಹಂದಿ ಸತ್ತು ಬಾಣ ಉಳಿಯಿತು. ಆ ಬಾಣದಿಂದ ಸತ್ತ ಹಂದಿಯ ಕಾಲು, ಕೊಳಗ, ಹಲ್ಲು, ಕೋರಿ, ಕಣ್ಣು, ತಲೆ, ಕರಳು, ಮಿದಡು, ಚರ್ಮ, ಕೂದಲ ಮೊದಲಾದವನು ತೆಗೆದು ಉಳಿದುದನು ನೀರಿಲ್ಲದೆ ಹೆಸರಿಟ್ಟು, ಬೆಂಕಿಯಿಲ್ಲದೆ ಸುಟ್ಟು, ಪಾಕವ ಮಾಡಿ, ಎನ್ನ ನಿರ್ಮಾಯಪ್ರಭುವಿಂಗೆ ಅರ್ಪಿಸಿ, ಆ ಪ್ರಭುವಿನ ಮಹಾಪ್ರಸಾದವ ಕೊಂಡು ಕಾಯಕವ ಮಾಡುತಿರ್ದೆನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.