Index   ವಚನ - 166    Search  
 
ಒಂದು ಜಡಿಯ ಬಿಚ್ಚಿ ಸಹಸ್ರ ಹುರಿಗೂಡಿದ ಒಂದು ಹಗ್ಗ. ಮೂರು ಹುರಿಗೂಡಿದ ಒಂದು ಹಗ್ಗ. ಒಂದು ಹುರಿಗೂಡಿದ ಒಂದು ಹಗ್ಗ. ನಾಲ್ಕು ಹುರಿಗೂಡಿದ ಒಂದು ಹಗ್ಗ. ಆರು ಹುರಿಗೂಡಿದ ಒಂದು ಹಗ್ಗ. ಹತ್ತು ಹುರಿಗೂಡಿದ ಒಂದು ಹಗ್ಗ. ದ್ವಾದಶ ಹುರಿಗೂಡಿದ ಒಂದು ಹಗ್ಗ. ಷೋಡಶ ಹುರಿಗೂಡಿದ ಒಂದು ಹಗ್ಗ. ಎರಡು ಹುರಿಗೂಡಿದ ಒಂದು ಹಗ್ಗ. ಇಂತೀ ಹುರಿಗೂಡಿದ ಹಗ್ಗ ಮೊದಲಾದ ಅನೇಕ ಹುರಿಗೂಡಿದ ಒಂದು ಅಖಂಡ ಹಗ್ಗವಮಾಡಿ, ನಾಲ್ಕು ಹುರಿ ಹಗ್ಗದಿಂ ಬ್ರಹ್ಮನ ಕಟ್ಟಿ, ಷಡುಹುರಿ ಹಗ್ಗದಿಂ ವಿಷ್ಣುವಿನ ಕಟ್ಟಿ, ದಶಹುರಿ ಹಗ್ಗದಿಂ ರುದ್ರನ ಕಟ್ಟಿ, ದ್ವಾದಶಹುರಿ ಹಗ್ಗದಿಂ ಈಶ್ವರನ ಕಟ್ಟಿ, ಷೋಡಶಹುರಿ ಹಗ್ಗದಿಂ ಸದಾಶಿವನ ಕಟ್ಟಿ, ದ್ವಿಹುರಿ ಹಗ್ಗದಿಂ ಶಿವನ ಕಟ್ಟಿ, ಸಹಸ್ರ ಹುರಿಹಗ್ಗದಿಂ ಮರ್ತ್ಯದರಸನ ಕಟ್ಟಿ, ಮೂರು ಹುರಿಹಗ್ಗದಿಂ ಸ್ವರ್ಗಲೋಕದರಸನ ಕಟ್ಟಿ, ಒಂದು ಹುರಿಹಗ್ಗದಿಂ ಪಾತಾಳಲೋಕದರಸನ ಕಟ್ಟಿ, ಅನಂತ ಹುರಿಗೂಡಿದ ಅಖಂಡ ಹಗ್ಗದಿಂ ಚತುರ್ದಶಭುವನಯುಕ್ತವಾದ ಬ್ರಹ್ಮಾಂಡವ ಕಟ್ಟಿ, ಕಾಯಕವ ಮಾಡುತಿರ್ದನಯ್ಯ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ. ಈ ಭೇದವ ಬಲ್ಲವರು ಲಿಂಗಸಂಬಂಧಿಗಳು ಈ ಭೇದವ ತಿಳಿಯದವರು ಅಂಗಸಂಬಂಧಿಗಳು.