Index   ವಚನ - 185    Search  
 
ಇಂತಪ್ಪ ಲಿಂಗೈಕ್ಯವಹ ಭೇದವ ತಿಳಿಯದೆ ಮೂಢಮತಿಯಿಂದ ಕಾಡಲಿಂಗವ ಕೈಯಲ್ಲಿ ಪಿಡಿದು, ಮೈಯಲ್ಲಿ ಬೂದಿಯ ಧರಿಸಿ, ಗುಡ್ಡಗಂಹರ ಗುಹೆಗಳಲ್ಲಿ ಕಲ್ಲಪಡಿಯಲ್ಲಿ ಪರ್ಣಶಾಲೆಯ ಬಂಧಿಸಿ, ಅನ್ನ ಉದಕ ನಿದ್ರೆಯ ತೊರೆದು, ಪರ್ಣಾಹಾರವ ಭಕ್ಷಿಸಿ, ತನುವನೊಣಗಿಸಿ, ಮನವ ಬಳಲಿಸಿ, ಆತ್ಮನ ಸತ್ವಗುಂದಿ, ಚಳಿ ಮಳಿ ಗಾಳಿ ಬಿಸಿಲುಗಳಿಂದ, ಕಲ್ಲುಮರದಂತೆ ಕಷ್ಟಬಟ್ಟರೆ, ಇಂತಪ್ಪವರು ಲಿಂಗೈಕ್ಯವಾಗಲರಿಯರು ; ಕಡೆಯಲ್ಲಿ ಭವಭಾರಿಗಳು. ಮತ್ತೆಂತೆಂದಡೆ : ತಮ್ಮ ನಿಲವ ತಾವರಿಯದೆ ಎಲ್ಲಿ ಕುಳಿತರೂ ಇಲ್ಲ ; ಎಲ್ಲಿ ಹೋದಡೆಯೂ ಇಲ್ಲ. ಏನು ಮಾಡಿದಡೆಯು ವ್ಯರ್ಥವಲ್ಲದೆ ಸ್ವಾರ್ಥವಿಲ್ಲ. ಅದೇನು ಕಾರಣವೆಂದಡೆ : ಸುಜ್ಞಾನೋದಯವಾಗಿ ಶ್ರೀಗುರುಕಾರುಣ್ಯವ ಪಡೆದು ಲಿಂಗಾಂಗಸಂಬಂಧಿಯಾಗಿ ಸರ್ವಾಂಗಲಿಂಗಮಯ ತಾನೆಂದು ತಿಳಿದು, ಆ ಘನಮಹಾ ಇಷ್ಟಬ್ರಹ್ಮದಲ್ಲಿ ಬೇರೆಯಲ್ಲದೆ ಕೂಡಬಲ್ಲರೆ ಅದೇ ಲಿಂಗೈಕ್ಯ ಎಂದನಯ್ಯ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.